ಇಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮೆಗಾ ರ್ಯಾಲಿ; ಬದಲಾಗಲಿದೆಯೇ ಲೋಕಸಭೆ ಚುನಾವಣೆ ಚಿತ್ರಣ?

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶನಿವಾರ ಆಯೋಜಿಸಿರುವ ಮೆಗಾ ರ್ಯಾಲಿಗೆ ವೇದಿಕೆ ಸಿದ್ದವಾಗಿದೆ...
ಕೋಲ್ಕತ್ತಾದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಮತಾ ಬ್ಯಾನರ್ಜಿ ಮಾತುಕತೆ
ಕೋಲ್ಕತ್ತಾದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಮತಾ ಬ್ಯಾನರ್ಜಿ ಮಾತುಕತೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶನಿವಾರ ಆಯೋಜಿಸಿರುವ ಮೆಗಾ ರ್ಯಾಲಿಗೆ ವೇದಿಕೆ ಸಿದ್ದವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರ್ಯಾಲಿ ಆರಂಭವಾಗಲಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಉಳಿದ ರಾಜಕೀಯ ಪಕ್ಷಗಳೆಲ್ಲಾ ಒಗ್ಗಟ್ಟಿನ ಪ್ರದರ್ಶನ ಮಾಡುವ ಮಹಾ ರ್ಯಾಲಿ ಇದಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಮೋದಿ ವಿರುದ್ಧ ತಮ್ಮ ಒಗ್ಗಟ್ಟು ತೋರಿಸಲು ಹಲವು ರಾಜ್ಯಗಳ ರಾಜಕೀಯ ಘಟಾನುಘಟಿಗಳು ಈ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಬಿಜೆಪಿಯೇತರ ಸಂಯುಕ್ತ ರಂಗ ನಿರ್ಮಾಣಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಪತ್ರ ಬರೆದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ನಾಶ ಮಾಡಲು ಹೊರಟಿರುವ ನಮ್ಮ ದೇಶಕ್ಕೆ ಆಧಾರ ಸ್ತಂಭವಾಗಿರುವ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತೆಯನ್ನು ರಕ್ಷಿಸಲು ನಿಜವಾದ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯನ್ನು ಕಾಣಲು ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗುವ ಅಗತ್ಯ ಖಂಡಿತಾ ಇದೆ, ಅದಕ್ಕೆ ಮೊದಲ ಹೆಜ್ಜೆಯಾಗಿ ಇಂದು ನೀವು ನಡೆಸುತ್ತಿರುವ ರ್ಯಾಲಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿಯವರು ಇಂದಿನ ರ್ಯಾಲಿಯಲ್ಲಿ ಭಾಗವಹಿಸುತ್ತಿಲ್ಲವಾದರೂ ಅವರ ಪರವಾಗಿ ಕಾಂಗ್ರೆಸ್ ನಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಶರದ್ ಯಾದವ್, ಎಂ ಕೆ ಸ್ಟಾಲಿನ್ ಮೊದಲಾದವರು ಈಗಾಗಲೇ ಕೋಲ್ಕತ್ತಾ ತಲುಪಿದ್ದಾರೆ.

ಈ ರ್ಯಾಲಿ ಬಗ್ಗೆ ಪ್ರತಿಕ್ರಿಯಿಸಿರುವ ಬಂಡಾಯ ಬಿಜೆಪಿ ಸಂಸದ ನಟ ಶತ್ರುಘ್ನ ಸಿನ್ಹಾ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಸೂಕ್ತ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಇನ್ನು ಇಂದಿನ ರ್ಯಾಲಿಯಲ್ಲಿ ಬಿಜೆಪಿಯ ಬಂಡಾಯ ನಾಯಕರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿಯವರು ಕೂಡ ಪಾಲ್ಗೊಳ್ಳುತ್ತಿದ್ದಾರೆ.

ವಿಮಾನ ನಿಲ್ದಾಣದಿಂದ ಕೋಲ್ಕತ್ತಾದ ರ್ಯಾಲಿ ನಡೆಯುವ ಸ್ಥಳದವರೆಗೆ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕರ್ನಾಟಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಇನ್ನೂ ಅನೇಕ ರಾಷ್ಟ್ರ ನಾಯಕರ ಪೋಸ್ಟರ್ ಗಳು ರಾರಾಜಿಸುತ್ತಿವೆ.

ನಿನ್ನೆ ರ್ಯಾಲಿ ನಡೆಯುವ ಸ್ಥಳ ಪರಿಶೀಲನೆ ಮಾಡಿದ ಮಮತಾ ಬ್ಯಾನರ್ಜಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 125 ಸೀಟುಗಳನ್ನು ಗೆಲ್ಲಲಿದೆ ಎಂದಿದ್ದಾರೆ. ಈ ಹಿಂದೆ ಕಳೆದ ವರ್ಷ ಜುಲೈಯಲ್ಲಿ ನಡೆದ ಟಿಎಂಸಿ ಹುತಾತ್ಮರ ದಿನ ರ್ಯಾಲಿಯಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲಬಹುದು ಎಂದಿದ್ದರು.

ಟಿಎಂಸಿ ಮುಖ್ಯಸ್ಥೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಆಹ್ವಾನ ನೀಡಿದ್ದರೂ ಅವರು ಭಾಗಿಯಾಗುವ ಬಗ್ಗೆ ದೃಢ ನಿರ್ಧಾರ ಸಿಕ್ಕಿಲ್ಲ. ಕೇರಳ ಕಾಂಗ್ರೆಸ್ ಗೆ ಟಿಎಂಸಿ ಕಡೆಯಿಂದ ಆಹ್ವಾನ ಬಂದಿಲ್ಲ. ನಮಗೆ ರ್ಯಾಲಿಯಲ್ಲಿ ಭಾಗವಹಿಸಲು ಆಹ್ವಾನ ಬಂದಿಲ್ಲ. ಆದರೂ ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗಬೇಕೆಂಬ ಬಯಕೆಗೆ ನಮ್ಮ ಹಾರೈಕೆಯಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com