
ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಪ್ರತಿಪಕ್ಷಗಳ ಬ್ರಿಗೇಡ್ ಸಮಾವೇಶವನ್ನು ಬಿಜೆಪಿಯು ದ್ವಂದ್ವ ನಿಲುವುಗಳನ್ನು ಹೊಂದಿದ ನಾಯಕರ ನಡುವಿನ ಸ್ವಾರ್ಥ ಹಿತಾಸಕ್ತಿಯ ರ್ಯಾಲಿ ಎಂದು ಟೀಕಿಸಿದೆ.
ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಒಕ್ಕೂಟ ಭಾರತ ಹೆಸರಿನ ರ್ಯಾಲಿಯನ್ನು ಭಿನ್ನ ಪ್ರತಿಪಕ್ಷಗಳ ಪ್ರದರ್ಶನ ಎಂದು ಟೀಕಿಸಿದ ಬಿಜೆಪಿ ಅದರಲ್ಲಿ ಭಾಗವಹಿಸಿದ ನಾಯಕರು ಒಂದೇ ನಿಲುವಿನ ಅಜೆಂಡಾ ಹೊಂದಿಲ್ಲ, ಈ ಮಹಾ ಘಟಬಂಧನದ ನಾಯಕರು ಯಾರು ಹಾಗಾದರೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ಪ್ರಶ್ನಿಸಿದರು.
ಇಲ್ಲಿ ಭಾಗವಹಿಸಿದ ನಾಯಕರು ಪರಸ್ಪರ ಜಗಳವಾಡುತ್ತಾರೆ. ಸ್ವಾರ್ಥ ಉದ್ದೇಶದಿಂದ ಅವರೆಲ್ಲರೂ ಒಂದಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗಳು ಕಾಂಗ್ರೆಸ್ ನ್ನು ಏಕೆ ದೂರವಿಟ್ಟಿವೆ ಎಂದು ಕೇಳಿದರು.
ವಿರೋಧ ಪಕ್ಷಗಳಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂಬುದೇ ನಿರ್ಣಯವಾಗಿಲ್ಲ, ಹೀಗಿರುವಾಗ ಅವರಿಂದ ಸಮಾನ ನಿಲುವುಗಳನ್ನು ನಿರೀಕ್ಷಿಸಲು ಹೇಗೆ ಸಾಧ್ಯ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವುದೊಂದೇ ಪ್ರತಿಪಕ್ಷಗಳ ಮುಖ್ಯ ಅಜೆಂಡಾವಾಗಿದೆ. ದೇಶದ ಉನ್ನತಿಗೆ ಅವರಲ್ಲಿ ಸರಿಯಾದ ಮಾರ್ಗಸೂಚಿಯಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ವಿರೋಧ ಪಕ್ಷಗಳಲ್ಲಿರುವ ನಾಯಕರೆಲ್ಲರೂ ಪ್ರಧಾನ ಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆಯಲ್ಲಿ ಕೇವಲ ಒಬ್ಬ ಸಂಸದನನ್ನಿಟ್ಟುಕೊಂಡು ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿಯವರನ್ನು ಪರೋಕ್ಷವಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟೀಕಿಸಿದರು.ಪ್ರಧಾನಿ ಮೋದಿಯವರು ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ದೇಶದ ಎಲ್ಲಾ ವರ್ಗದ ಜನರನ್ನು ತಲುಪಿದ್ದು ಜನರು ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
Advertisement