ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ರಾಜಕೀಯ ಹೋರಾಟ, ವೈಯಕ್ತಿಕ ಬದುಕು

ಭಾರತೀಯ ರಾಜಕೀಯದಲ್ಲಿ ಜಾರ್ಜ್ ಫರ್ನಾಂಡಿಸ್ ಅವರದ್ದು ಅಚ್ಚಳಿಯದ ಹೆಸರು. ಅವರ ಜೀವನ...
ಜಾರ್ಜ್ ಫರ್ನಾಂಡಿಸ್
ಜಾರ್ಜ್ ಫರ್ನಾಂಡಿಸ್

ಭಾರತೀಯ ರಾಜಕೀಯದಲ್ಲಿ ಜಾರ್ಜ್ ಫರ್ನಾಂಡಿಸ್ ಅವರದ್ದು ಅಚ್ಚಳಿಯದ ಹೆಸರು. ಅವರ ಜೀವನ, ರಾಜಕೀಯ ಪಯಣವನ್ನು ಅವರು ನಿಧನರಾದ ಸಂದರ್ಭದಲ್ಲಿ ಮೆಲುಕು ಹಾಕಿದಾಗ ಅನೇಕ ವಿಷಯಗಳು ನೆನಪಿಗೆ ಬರುತ್ತವೆ.

ಬಾಲ್ಯ ಜೀವನ: ಜಾರ್ಜ್ ಫರ್ನಾಂಡಿಸ್ ಮೂಲತಃ ಮಂಗಳೂರಿನವರು. 1930ರಲ್ಲಿ ಜೂನ್ 3ರಂದು ಜಾನ್ ಜೋಸೆಫ್ ಫರ್ನಾಂಡಿಸ್ ಮತ್ತು ಅಲಿಸ್ ಮಾರ್ಥ ಫರ್ನಾಂಡಿಸ್ ಅವರ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಮನೆ ಹತ್ತಿರದ ಶಾಲೆಯಲ್ಲಿಯೇ ಪೂರೈಸಿದರು.

ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಹತ್ತನೇ ತರಗತಿ ಮುಗಿಸಿದರು. ಪೋಷಕರು ಕಾಲೇಜಿಗೆ ಹೋಗಬೇಕೆಂದು ಒತ್ತಾಯಿಸಿದರೂ ಮುಂದೆ ಓದದೆ ಪಾದ್ರಿಯಾಗುತ್ತೇನೆಂದು ಬೆಂಗಳೂರಿಗೆ ಹೊರಟರು. 1946ರಲ್ಲಿ ಪಾದ್ರಿಯಾಗಲೆಂದು ತರಬೇತಿಗೆ ಬೆಂಗಳೂರಿಗೆ 16ನೇ ವಯಸ್ಸಿನಲ್ಲಿ ಬಂದಿದ್ದರು. ಅಲ್ಲಿಂದ ಮುಂಬೈಗೆ ಹೋಗಿ ಸಾಮಾಜಿಕ ವ್ಯಾಪಾರ ಸಂಘಟನೆ ಚಳವಳಿಗೆ ಸೇರಿಕೊಂಡರು. ನಂತರ ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ವ್ಯಾಪಾರ ಸಂಘಟನೆಯಲ್ಲಿದ್ದುಕೊಂಡು ಮುಂದಾಳತ್ವ ವಹಿಸಿ1950 ಮತ್ತು 1960ರ ದಶಕದಲ್ಲಿ ಹಲವು ಮುಷ್ಕರ ಮತ್ತು ಬಂದ್ ಗಳನ್ನು ನಡೆಸಿದ್ದರು. ನಂತರ ರಾಜಕೀಯಕ್ಕೆ ಸೇರಿಕೊಂಡರು. ಜನತಾ ಪಕ್ಷ ಸ್ಥಾಪಿಸಿ ದಕ್ಷಿಣ ಮುಂಬೈ ಕ್ಷೇತ್ರದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಸ್ ಕೆ ಪಾಟೀಲ್ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾದರು.

ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಜಾರ್ಜ್​ ಫರ್ನಾಂಡಿಸ್​ಗೆ ಇಂದಿರಾ ಹೆದರುತ್ತಿದ್ದರು. ನಂತರ ಜಾರ್ಜ್​​ರನ್ನು ಬಂಧನ ಮಾಡಲಾಯಿತು. ಈ ವೇಳೆ ಇಂದಿರಾ ನಿಟ್ಟುಸಿರುಬಿಟ್ಟರು. ನಾವಿಬ್ಬರೂ ಉತ್ತಮ ಗೆಳೆಯರಾಗಿದ್ದೆವು. ತುರ್ತು ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸಿದ್ದೇವೆ. ನಾನು ಭೂಗತನಾಗಿ ಕಾರ್ಯನಿರ್ವಹಿಸಿದರೆ, ಜಾರ್ಜ್​ ಎಲ್ಲರ ಎದುರಿದ್ದೇ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾದ ನಂತರ ಅವರು ಮತ್ತೆ ಎದ್ದೇಳಲೇ ಇಲ್ಲ ಎಂಬುದು ಬೇಸರದ ಸಂಗತಿ ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ.

“ಜಾರ್ಜ್​ ಅವರದ್ದು ವಿಶಾಲ ಹೃದಯ, ಸಮಾಜವಾದಿ. ರಾಮ್​ ಮನೋಹರ್​ ಲೋಹಿಯಾ ಹಿಂಬಾಲಕರು. ನಾನು ಇದನ್ನು ವಿರೋಧಿಸಿದ್ದೆ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಇಂದಿರಾ ಗಾಂಧಿ ವಿರುದ್ಧ ಒಟ್ಟಾಗಿ  ಹೋರಾಡಬಹುದು ಎಂದು ನನಗೆ ಮನವರಿಕೆ ಮಾಡಿಕೊಟ್ಟಿದ್ದರು,” ಎನ್ನುತ್ತಾರೆ ಸ್ವಾಮಿ.

1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾಗ ಅದರ ವಿರುದ್ಧ ಪ್ರತಿಭಟನೆ ಮಾಡಿದ ನಾಯಕರಾಗಿದ್ದರು. 1976ರಲ್ಲಿ ಅವರನ್ನು ಬಂಧಿಸಲಾಗಿತ್ತು. 1977ರಲ್ಲಿ ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡ ನಂತರ ಬಿಹಾರದ ಮುಜಾಫರ್ ಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದುಬಂದು ಕೇಂದ್ರ ಕೈಗಾರಿಕಾ ಸಚಿವರಾದರು.

ಪತ್ರಕರ್ತರಾಗಿಯೂ ಜಾರ್ಜ್ ಫರ್ನಾಂಡಿಸ್ ಸೇವೆ ಸಲ್ಲಿಸಿದ್ದಾರೆ. 1949ರಲ್ಲಿ ಕನ್ನಡದಲ್ಲಿ ರೈತವಾಣಿ ಸಪ್ತಾಹಿಕದ ಸಂಪಾದಕರಾಗಿದ್ದರು. ಮುಂಬೈಗೆ ಹೋದ ಮೇಲೆ ಕೂಡ ಜೀವನ ಸಾಗಿಸಲು ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದರು. ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ.

1989ರಿಂದ 1990ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಕೊಂಕಣ ರೈಲ್ವೆ ಯೋಜನೆಯಲ್ಲಿ ಉತ್ತಮ ಕೆಲಸ ಮಾಡಿದ್ದರು. 1998ರಿಂದ 2004ರವರೆಗೆ ಎನ್ ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದಾಗ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕಾರ್ಗಿಲ್ ಯುದ್ಧ ನಡೆಯಿತು. ಪೊಕ್ರಾನ್ ನಲ್ಲಿ ಪರಮಾಣು ಪರೀಕ್ಷೆ ಕೂಡ ನಡೆಯಿತು.  ಈ ಮಧ್ಯೆ ಬರಾಕ್ ಕ್ಷಿಪಣಿ ಹಗರಣ ಮತ್ತು ತೆಹಲ್ಕಾ ಹಗರಣದಲ್ಲಿ ಜಾರ್ಜ್ ಫರ್ನಾಂಡಿಸ್ ಹೆಸರು ಕೇಳಿಬಂತು.
 
ವಾಜಪೇಯಿ-ಜಾರ್ಜ್ ಜೋಡಿ ಸಂಸತ್ತಿನಲ್ಲಿ ಸತ್ವಪರೀಕ್ಷೆ ಎದುರಿಸಬೇಕಾದ ಸನ್ನಿವೇಶವೂ ಎದುರಾಗಿತ್ತು. 1999ರಲ್ಲಿ ನಡೆದ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಭಾರತದ 500ಕ್ಕಿಂತಲೂ ಅಧಿಕ ಯೋಧರು ಹುತಾತ್ಮರಾಗಿದ್ದರು. ಈ ಯೋಧರ ಪಾರ್ಥಿವ ಶರೀರಗಳನ್ನು ಅವರ ಸಂಬಂಧಿಗಳಿಗೆ ಗೌರವಪೂರ್ವಕವಾಗಿ ಒಪ್ಪಿಸಲು ಸರ್ಕಾರದ ವತಿಯಿಂದ ಶವಪೆಟ್ಟಿಗೆಗಳನ್ನು ಖರೀದಿಸಲಾಗಿತ್ತು.

ಏಳು ಕೋಟಿ ರೂ. ವೆಚ್ಚದಲ್ಲಿ 500 ಅಲ್ಯುಮಿನಿಯಂ ಶವಪೆಟ್ಟಿಗೆಗಳು ಹಾಗೂ 3,000 ಶವಹೊದಿಕೆಗಳನ್ನು ಖರೀದಿಸಲು ಅಮೆರಿಕದ ಬ್ಯೂಟ್ರನ್ ಅಂಡ್ ಬೈಝಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕಿಂತ ಹೆಚ್ಚಿರುವುದು ನಂತರ ಬೆಳಕಿಗೆ ಬಂದಿತ್ತು. ಇನ್ನೊಂದೆಡೆ, ಸಿಎಜಿ ವರದಿ ಕೂಡ ಒಟ್ಟಾರೆ ಈ ಖರೀದಿಯಿಂದ ಸರ್ಕಾರಕ್ಕೆ 89.76 ಲಕ್ಷ ರೂ. ನಷ್ಟವುಂಟಾಗಿದೆ ಎಂದು ಹೇಳಿತ್ತು.
ಆಗ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರವನ್ನೇ ಸಾರಿತ್ತು. ರಕ್ಷಣಾ ಸಚಿವ ಜಾರ್ಜ್ ರಾಜೀನಾಮೆಗೆ ಪಟ್ಟುಹಿಡಿಯಿತು. ‘ನಾನು ನಿರಪರಾಧಿ’ ಎಂಬ ಜಾರ್ಜ್ ವಾದವನ್ನು ಯಾರೂ ಕೇಳಲೂ ಸಿದ್ಧವಿರಲಿಲ್ಲ. 2004ರ ಚುನಾವಣೆಯಲ್ಲಿ ಎನ್​ಡಿಎ ಸೋಲನನುಭವಿಸಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಾರ್ಗಿಲ್ ಶವಪೆಟ್ಟಿಗೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. 2009ರ ಆಗಸ್ಟ್​ನಲ್ಲಿ ಸೇನೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ ಜಾರ್ಜ್ ಫರ್ನಾಂಡಿಸ್​ಗೆ ಕ್ಲೀನ್​ಚಿಟ್ ನೀಡಿತ್ತು.

ಸಿಬಿಐ ವಿಶೇಷ ನ್ಯಾಯಾಲಯ 2013ರಲ್ಲಿ ಮೂವರೂ ಅಧಿಕಾರಿಗಳನ್ನು ಖುಲಾಸೆಗೊಳಿಸಿತ್ತು. 2004ರಲ್ಲಿ ಈ ಹಗರಣ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾಗಿತ್ತು. ಶವಪೆಟ್ಟಿಗೆ ಪ್ರಕರಣದಲ್ಲಿ ಜಾರ್ಜ್ ಫರ್ನಾಂಡಿಸ್ ನಿದೋಷಿ ಎಂದು ಸುಪ್ರೀಂ ಕೋರ್ಟ್ 2015ರ ಅಕ್ಟೋಬರ್ 13ರಂದು ತೀರ್ಪಿತ್ತಿತು.

ಜಾರ್ಜ್ ಫರ್ನಾಂಡಿಸ್ ಅವರು 9 ಬಾರಿ ಲೋಕಸಭೆ ಚುನಾವಣೆಯನ್ನು 1967ರಿಂದ 2004ರವರೆಗೆ ಗೆದ್ದುಕೊಂಡಿದ್ದಾರೆ.

ವೈಯಕ್ತಿಕ ಜೀವನ: ಮಾಜಿ ಕೇಂದ್ರ ಸಚಿವ ಹುಮಾಯೂನ್ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು ಜಾರ್ಜ್ ಫರ್ನಾಂಡಿಸ್ ಪ್ರೀತಿಸಿ 1971ರಲ್ಲಿ ವಿವಾಹವಾಗಿದ್ದರು. ಅವರಿಗೊಬ್ಬ ಸೀನ್ ಫರ್ನಾಂಡಿಸ್ ಎಂಬ ಪುತ್ರರಿದ್ದು ಪ್ರಸ್ತುತ ಅಮೆರಿಕಾದ ನ್ಯೂಯಾರ್ಕ್ ನಲ್ಲಿದ್ದಾರೆ. ಸಂಸಾರದಲ್ಲಿ ಹೊಂದಾಣಿಕೆಯಾಗದೆ ಜಾರ್ಜ್ ಫರ್ನಾಂಡಿಸ್ ಮತ್ತು ಲೈಲಾ ಕಬೀರ್ 1980ರ ಹೊತ್ತಿಗೆ ಪ್ರತ್ಯೇಕವಾದರು.

1884ರಿಂದ ಜಯಾ ಜೇಟ್ಲಿ ಜಾರ್ಜ್ ಅವರಿಗೆ ಸ್ನೇಹಿತೆಯಾಗಿದ್ದರು. ಫೆರ್ನಾಂಡಿಸ್ ಅವರು ಕೊಂಕಣಿ, ಇಂಗ್ಲಿಷ್, ಹಿಂದಿ, ತುಳು, ಕನ್ನಡ, ಮರಾಠಿ, ಉರ್ದು, ಮಲಯಾಳಂ, ಲ್ಯಾಟಿನ್ ಭಾಷೆಗಳನ್ನು ಚೆನ್ನಾಗಿ ತಿಳಿದಿದ್ದರು.

ನೆನಪುಶಕ್ತಿ ಮತ್ತು ನರ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಫರ್ನಾಂಡಿಸ್ ಅವರ ಜೀವನದಲ್ಲಿ ಮತ್ತೆ ಲೈಲಾ ಆಗಮಿಸಿದರು. ಹರಿದ್ವಾರದ ಬಾಬಾ ರಾಮದೇವ್ ಆಶ್ರಮದಲ್ಲಿ ಚಿಕಿತ್ಸೆ ಕೊಡಿಸುವಂತೆ ಲೈಲಾ ಕಬೀರ್ ಮತ್ತು ಪುತ್ರ ಸೀನ್ ಒತ್ತಾಯಿಸಿ ಸೇರಿಸಿದ್ದರು. ಆದರೆ ಅದನ್ನು ಕುಟುಂಬ ಸದಸ್ಯರು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿ ಮತ್ತು ಪುತ್ರ ಫರ್ನಾಂಡಿಸ್ ಅವರನ್ನು ಅಜ್ಞಾನ ಸ್ಥಳದಲ್ಲಿಟ್ಟಿದ್ದರು. ದೆಹಲಿ ಕೋರ್ಟ್ ಸಂಬಂಧಿಕರಿಗೆ ಫರ್ನಾಂಡಿಸ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. 2012ರಲ್ಲಿ ಜಯಾ ಜೇಟ್ಲಿಗೆ ಕೂಡ ಸುಪ್ರೀಂ ಕೋರ್ಟ್ ಫರ್ನಾಂಡಿಸ್ ಅವರ ಭೇಟಿಗೆ ಅವಕಾಶ ಮಾಡಿಕೊಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com