'ಕಾಂಗ್ರೆಸ್ ನಾಯಕರನ್ನು ಜನ ಪಾಕ್ ಏಜೆಂಟರಂತೆ ನೋಡುತ್ತಿದ್ದಾರೆ': ವಾಯುದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಪಕ್ಷ ತ್ಯಜಿಸಿದ ಬಿಹಾರ ಕೈ ಮುಖಂಡ

ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಕುರಿತು ಸಾಕ್ಷ್ಯಧಾರಗಳನ್ನು ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ನಡೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಕ್ಷವನ್ನೇ ತ್ಯಜಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪಾಟ್ನಾ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಕುರಿತು ಸಾಕ್ಷ್ಯಧಾರಗಳನ್ನು ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ನಡೆಯನ್ನು ವಿರೋಧಿಸಿ ಬಿಹಾರ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಕ್ಷವನ್ನೇ ತ್ಯಜಿಸಿದ್ದಾರೆ.
ಹೌದು.. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ನಡೆಸಿದ್ದ ವಾಯುದಾಳಿ ಸಂಬಂಧ ಇನ್ನೂ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ವಾಯುದಾಳಿಗೆ ಸಾಕ್ಷ್ಯ ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಅವರದೇ ಪಕ್ಷದ ಮುಖಂಡರೊಬ್ಬರು ತಿರುಗಿಬಿದ್ದಿದ್ದಾರೆ. 
'ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ಕೇಳಿದ್ದರಿಂದ ಬೇಸರವಾಗಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಬಿಹಾರ ಕಾಂಗ್ರೆಸ್‌ ವಕ್ತಾರ ವಿನೋದ್‌ ಶರ್ಮಾ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶರ್ಮಾ, 'ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ, ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿದ್ದೇನೆ. ಪಾಕಿಸ್ತಾನದಲ್ಲಿರುವ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಸಾಕ್ಷಗಳನ್ನು ಕೇಳಿದ ಕಾಂಗ್ರೆಸ್‌ ನಡೆಯಿಂದ ಬೇಸರವಾಗಿದೆ. ಕಳೆದ 30 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಆದರೆ ನಮ್ಮ ನಾಯಕರ ಇತ್ತೀಚಿನ ಕೆಲ ನಡೆಗಳು ಸರಿಯಿಲ್ಲ. ಸೈನಿಕರ ಶೌರ್ಯವನ್ನೇ ಪ್ರಶ್ನೆ ಮಾಡುವ ಮೂಲಕ ಕೆಲ ನಾಯಕರು ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ನಾಯಕರ ನಡೆಯಿಂದಾಗಿ ಜನ ಇಂದು ಕಾಂಗ್ರೆಸ್ ಮುಖಂಡರನ್ನು ಪಾಕಿಸ್ತಾನದ ಏಜೆಂಟರಂತೆ ನೋಡುತ್ತಿದ್ದಾರೆ. ನಿಜಕ್ಕೂ ನನಗೆ ಇದರಿಂದ ಬೇಸರವಾಗಿದೆ ಮತ್ತು ಪಕ್ಷದ ನಡೆ ಬಗ್ಗೆ ನನಗೆ ಅಸಹ್ಯವಾಗುತ್ತಿದೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜಿನಾಮೆ ನೀಡುತ್ತಿದೇನೆ ಎಂದು ಶರ್ಮಾ ಹೇಳಿದ್ದಾರೆ.
ವಾಯುದಾಳಿಯಿಂದಾಗಿ 250ಕ್ಕೂ ಹೆಚ್ಚು ಉ್ರಗರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ದಾಳಿಯ ಸಾಕ್ಷ್ಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತ್ತು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಾಳಿಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com