'ನನ್ನ ಪಾಸ್ ಮಾಡಿದ್ರೆ ನೀವೇ ನನ್ನ ಬಾವ, ಇಲ್ಲದಿದ್ರೆ ನಾನೇ ನಿಮ್ಮ ಬಾವ'; ಮೌಲ್ಯಮಾಪಕರಿಗೆ ವಿದ್ಯಾರ್ಥಿಯ ಎಚ್ಚರಿಕೆ?

'ನನ್ನನ್ನು ಪರೀಕ್ಷೆಯಲ್ಲಿ ಪಾಸ್‌ ಮಾಡಿದರೆ ನನ್ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವ ಮೂಲಕ ಬಾವನನ್ನಾಗಿ ಮಾಡಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿಮ್ಮ ಸಹೋದರಿಯನ್ನು ಮದುವೆಯಾಗಿ ನಾನೇ ನಿಮಗೆ ಬಾವನಾಗುತ್ತೇನೆ!'...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: 'ನನ್ನನ್ನು ಪರೀಕ್ಷೆಯಲ್ಲಿ ಪಾಸ್‌ ಮಾಡಿದರೆ ನನ್ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವ ಮೂಲಕ ಬಾವನನ್ನಾಗಿ ಮಾಡಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿಮ್ಮ ಸಹೋದರಿಯನ್ನು ಮದುವೆಯಾಗಿ ನಾನೇ ನಿಮಗೆ ಬಾವನಾಗುತ್ತೇನೆ!' ಇದು ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಹಾಕಿದ ಬೆದರಿಕೆ.
ಹೌದು.. ಉತ್ತರ ಪ್ರದೇಶದಲ್ಲಿ ಬೋರ್ಡ್ ಎಕ್ಸಾಂಗಳು ಪೂರ್ಣಗೊಂಡು ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಈ ವೇಳೆ ವಿದ್ಯಾರ್ಥಿಗಳು ತಮ್ಮನ್ನು ಪಾಸ್ ಮಾಡಿಸುವಂತೆ ಉತ್ತರ ಪತ್ರಿಕೆಯಲ್ಲಿಟ್ಟಿರುವ ತರಹೇವಾರಿ ಪತ್ರಗಳು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಕೆಲವು ವಿದ್ಯಾರ್ಥಿಗಳು ಉತ್ತೀರ್ಣರನ್ನಾಗಿ ಮಾಡುವಂತೆ ಹಲವು ರೀತಿಯಲ್ಲಿ ಉತ್ತರ ಪತ್ರಿಕೆಯಲ್ಲೇ ಬೇಡಿಕೆ ಇಟ್ಟಿದ್ದಾರೆ. ಕೆಲವರು ಉತ್ತರ ಪತ್ರಿಕೆಗೆ ಹಣದ ನೋಟುಗಳನ್ನು ಜೋಡಿಸಿಕೊಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿ ಪ್ರಶ್ನೆಗಳಿಗೆ ಹನುಮಾನ್‌ ಚಾಲಿಸಾವನ್ನು ಬರೆದಿದ್ದಾನೆ. ಕೆಲವು ವಿದ್ಯಾರ್ಥಿಗಳು ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಮೌಲ್ಯಮಾಪಕರಿಗೆ ಬರೆದುಕೊಡುವ ಆಮಿಷ ಒಡ್ಡಿದ್ದಾರೆ. ಪ್ರತೀ ವರ್ಷವು ಇಂತಹ ಆಮೀಷಗಳು, ವಿದ್ಯಾರ್ಥಿಗಳ ತಲೆಹರಟೆಗಳು ವರದಿಯಾಗುತ್ತಲೇ ಇರುತ್ತವೆ. ಈ ವರ್ಷ ವಿಭಿನ್ನ ಎಂಬಂತೆ ವಿದ್ಯಾರ್ಥಿಗಳು ಮೌಲ್ಯಮಾಪಕರಿಗೆ ಮದುವೆ ಆಫರ್‌ಗಳನ್ನು ಕೊಟ್ಟಿದ್ದಾರೆ. 
ಒಬ್ಬ ವಿದ್ಯಾರ್ಥಿ ಮೌಲ್ಯಮಾಪಕರಿಗೆ ಹಣದ, ಆಮಿಷ ಒಡ್ಡಿದರೆ, ಮತ್ತೋರ್ವ ಆಸ್ತಿ ನೀಡುವುದಾಗಿ ಪತ್ರ ಬರೆದಿದ್ದಾನೆ. ಮತ್ತೋರ್ವ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮಗೆ ಪಾಸ್‌ ಮಾರ್ಕ್‌ ಕೊಡಿ, ನಿಮಗೆ ಸರಕಾರ ಸಂಬಳ ಕೊಡುವುದು ನಮ್ಮನ್ನು ಪಾಸ್‌ ಮಾಡುವುದಕ್ಕೆ ಎಂಬ ಎಚ್ಚರಿಕೆಯನ್ನು ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಮೂಲಕ ರವಾನೆ ಮಾಡಿದ್ದಾರೆ. 
ಮತ್ತೋರ್ವ ವಿದ್ಯಾರ್ಥಿ ನೇರವಾಗಿಯೇ  'ನೀವು ನನ್ನನ್ನು ಪರೀಕ್ಷೆಯಲ್ಲಿ ಪಾಸ್‌ ಮಾಡಿದರೆ ನನ್ನ ಸಹೋದರಿಯನ್ನು ನಿಮಗೆ ಕೊಟ್ಟು ಮದುವೆ ಮಾಡುವ ಮೂಲಕ ನಿಮ್ಮನ್ನು ಬಾವನನ್ನಾಗಿ ಮಾಡಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿಮ್ಮ ಸಹೋದರಿಯನ್ನು ಮದುವೆಯಾಗಿ ನಾನೇ ನಿಮಗೆ ಬಾವನಾಗುತ್ತೇನೆ ಎಂದು ವಾರ್ನಿಂಗ್ ನೀಡಿದ್ದಾನೆ.
ಇದೀಗ ವಿದ್ಯಾರ್ಥಿಗಳು ಮೌಲ್ಯಮಾಪಕರಿಗೆ ಬರೆದಿರುವ ಪತ್ರಗಳು, ಆಮಿಷಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಇನ್ನು ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ಕ್ಕೆ ಅಂತ್ಯಗೊಂಡಿದ್ದವು. ಮಾರ್ಚ್‌ 8ರಿಂದ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಉಭಯ ತರಗತಿ ಪರೀಕ್ಷೆಗಳಲ್ಲಿ ಸುಮಾರು 35 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com