ಗೋವಾ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುವ ಬೆದರಿಕೆ ಹಾಕಿದ ಎಂಜಿಪಿ

ಅತ್ತ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಗೋವಾದಲ್ಲಿ ರಾಜಕೀಯ ಮೇಲಾಟ ಮತ್ತೆ ಶುರುವಾಗಿದ್ದು, ಬಿಜೆಪಿಯ ಮೈತ್ರಿ ಪಕ್ಷ ಎಂಜಿಪಿ ತಾವು ಗೋವಾ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವ ಬೆದರಿಕೆ ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಣಜಿ: ಅತ್ತ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಗೋವಾದಲ್ಲಿ ರಾಜಕೀಯ ಮೇಲಾಟ ಮತ್ತೆ ಶುರುವಾಗಿದ್ದು, ಬಿಜೆಪಿಯ ಮೈತ್ರಿ ಪಕ್ಷ ಎಂಜಿಪಿ ತಾವು ಗೋವಾ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವ ಬೆದರಿಕೆ ಹಾಕಿದೆ.
ಹೌದು.. ತಮ್ಮ ಪಕ್ಷವನ್ನು ನಾಶಪಡಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯು, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದು ಕಾಂಗ್ರೆಸ್‌ ಜತೆ ಕೈ ಜೋಡಿಸುವ ಬೆದರಿಕೆ ಹಾಕಿದೆ. 
'ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಲಾವೂ ಮಾಮ್ಲತ್ ದಾರ್‌ ಅವರು ಪಕ್ಷದ ಶಾಸಕಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಪೂರ್ಣ ಹೊಣೆಯನ್ನು ತಾವೇ ತೆಗೆದುಕೊಂಡಿರುವುದಾಗಿ ರಾಜ್ಯಪಾಲ ಮತ್ತು ಸ್ಪೀಕರ್‌ ಗೆ ಪತ್ರ ಬರೆದಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಅಗತ್ಯ ಅನ್ನಿಸಿದರೆ ಸರ್ಕಾರದಿಂದ ಹೊರಬರಲೂ ನಾವು ಹಿಂದೇಟು ಹಾಕುವುದಿಲ್ಲ,' ಎನ್ನುವ ಮೂಲಕ ಪಕ್ಷದ ಅಧ್ಯಕ್ಷ ದೀಪಕ್‌ ಧವಳೀಕರ್‌ ಪರೋಕ್ಷವಾಗಿ ಬಿಜೆಪಿಯತ್ತ ಬೊಟ್ಟು ಮಾಡಿದ್ದಾರೆ. 
ಅಂತೆಯೇ ಬುಧವಾರ ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿರುವ ಅವರು, ಪ್ರಸಂಗ ಬಂದರೆ ಕಾಂಗ್ರೆಸ್ ಗೆ ಬೆಂಬಲ ನೀಡಲೂ ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ.
ಮಾಮ್ಲತ್ ದಾರ್‌ ಕಳೆದ ವಾರ ಈ ಪತ್ರ ಬರೆದಿದ್ದಾರೆ. ಅದು ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಹಾಲಿ 36 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 12 ಶಾಸಕರನ್ನು ಹೊಂದಿರುವ ಬಿಜೆಪಿಗೆ ತಲಾ ಮೂವರು ಶಾಸಕರು ಇರುವ ಎಂಜಿಪಿ ಮತ್ತು ಗೋವಾ ಫಾರ್ವರ್ಡ್‌ ಪಾರ್ಟಿ, ಮೂವರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ 14 ಶಾಸಕರನ್ನು ಹೊಂದಿದ್ದು, ಎನ್‌ಸಿಪಿಯ ಒಬ್ಬ ಶಾಸಕ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. 
ಇನ್ನು ಗೋವಾಗ ಶಿರೋಡಾ ಲೋಕಸಭಾ ಕ್ಷೇತ್ರದಿಂದ ಈಗಾಗಲೇ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಇದೇ ಕ್ಷೇತ್ರದದಿಂದ ಎಂಜಿಪಿಯ ದೀಪಕ್ ದವಳೀಕರ್ ಅವರೂ ಕೂಡ ಪ್ರಚಾರ ನಡೆಸಿ ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದ್ದರು. ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಭೆ ನಡೆಸಿ ಮಾತುಕತೆ ನಡೆಸಿದ ಬಳಿಕ ಪ್ರಚಾರ ಸ್ಥಗಿತಗೊಳಿಸಿದ್ದ ಧವಳೀಕರ್ ಅವರು ಇದೀಗ ಧಿಡೀರ್ ರಾಜಕೀಯ ಬೆಳವಣಿಗೆ ಬಳಿಕ ಮತ್ತೆ ಪ್ರಚಾರದಲ್ಲಿ ಪಾಲ್ಗೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ಟಾರೆ ಗೋವಾದಲ್ಲಿ ಇದೀಗ ರಾಜಕೀಯ ಬೇಗುದಿ ಬೇಯುತ್ತಿದ್ದು, ಎಂಜಿಪಿ ಇಂದು ತಳೆಯುವ ನಿರ್ಧಾರದ ಮೇಲೆ ಪ್ರಮೋದ್ ಸಾವಂತ್ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com