ಎ-ಸ್ಯಾಟ್ ಯೋಜನೆ ಆರಂಭವಾಗಿದ್ದೇ 2 ವರ್ಷಗಳ ಹಿಂದೆ: ಡಿಆರ್ ಡಿಒ ಅಧ್ಯಕ್ಷ ಸತೀಶ್ ರೆಡ್ಡಿ

ಬಾಹ್ಯಾಕಾಶದಲ್ಲಿದ್ದ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದ ಎ-ಸ್ಯಾಟ್ ಕ್ಷಿಪಣಿ ಯೋಜನೆ ಆರಂಭವಾಗಿದ್ದು ಕಳೆದ ವರ್ಷಗಳ ಹಿಂದೆ ಅಂದರೆ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಎಂದು ಡಿಆರ್ ಡಿಒ ಅದ್ಯಕ್ಷ ಸತೀಶ್ ರೆಡ್ಡಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಹ್ಯಾಕಾಶದಲ್ಲಿದ್ದ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದ ಎ-ಸ್ಯಾಟ್ ಕ್ಷಿಪಣಿ ಯೋಜನೆ ಆರಂಭವಾಗಿದ್ದು ಕಳೆದ ವರ್ಷಗಳ ಹಿಂದೆ ಅಂದರೆ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಎಂದು ಡಿಆರ್ ಡಿಒ ಅದ್ಯಕ್ಷ ಸತೀಶ್ ರೆಡ್ಡಿ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸತೀಶ್ ರೆಡ್ಡಿ ಅವರು, ಎ-ಸ್ಯಾಟ್ ಯೋಜನೆಯನ್ನು ನಾವು ಆರಂಭಿಸಿದ್ದು ಕಳೆದ 2ವರ್ಷಗಳ ಹಿಂದಷ್ಟೇ.. ಕಳೆದ ಆರು ತಿಂಗಳ ಹಿಂದೆ ಯೋಜನೆಯ ಪರೀಕ್ಷೆ ಆರಂಭಿಸಿದೆವು. ಎ-ಸ್ಯಾಟ್ ಮಿಸೈಲ್ (ಎಲ್ ಇಒ) ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ಮಾಡಿ ಉಡಾಯಿಸಿದೆ. ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನೇ ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲು ಕಾರಣ ಕೂಡ ಇದ್ದು, ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹ ಹೊಡೆದುರುಳಿಸಿದಾಗ ಅದು ನೇರವಾಗಿ ಭೂಮಿ ವಾತಾವರಣ ತಲುಪುತ್ತದೆ. ಆಗ ಅದರ ಬಿಡಿಭಾಗಗಳು ಭೂಮಿ ಗುರುತ್ವಾಕರ್ಷಣ ಬಲ ಹಾಗೂ ಅತಿಯಾದ ವಾತಾವರಣದ ಶಾಖಕ್ಕೆ ಸಿಕ್ಕು ಅಲ್ಲಿಯೇ ಉರಿದು ಭಸ್ಮವಾಗುತ್ತದೆ. ಇದರಿಂದ ಕಕ್ಷೆಯಲ್ಲಿರುವ ಯಾವುದೇ ಇತರೆ ಉಪಗ್ರಹಗಳಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಅಂತೆಯೇ ಇದು ತೀರಾ ಕಷ್ಟಕರವದ ಪ್ರಕ್ರಿಯೆಯಾಗಿದ್ದು ಎ-ಸ್ಯಾಟ್ ಅತ್ಯಂತ ಕರಾರುವಕ್ಕಾಗಿ ಉಪಗ್ರಹದ ಮೇಲೆ ದಾಳಿ ಮಾಡಿದೆ. ಕೈನೆಟಿಕ್ ಕಿಲ್ ಉಪಾಯದ ಮೂಲಕ ಉಪಗ್ರಹದ ಮೇಲೆ ಕ್ಷಿಪಣಿ ದಾಳಿ ಮಾಡಿದ್ದು, ಈ ಮಾದರಿಯ ದಾಳಿಯಲ್ಲಿ ಕ್ಷಿಪಣಿ ಅತ್ಯಂತ ಕರಾರುವಕ್ಕಾಗಿ ಗುರಿ ತಲುಪತ್ತದೆ ಎಂದು ಸತೀಶ್ ರೆಡ್ಡಿ ಹೇಳಿದರು.
ಕಳೆದ 2 ವರ್ಷಗಳ ಹಿಂದೆ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗಿದ್ದು, ಯೋಜನೆ ಸಂಬಂಧ ನಾವು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಅವರಿಗೆ ಮಾಹಿತಿ ನೀಡುತ್ತಿದ್ದೆವು. ಅವರೇ ಯೋಜನೆಯ ಪರೀಕ್ಷೆ ನಡೆಸುವಂತೆ ನಮಗೆ ಹೇಳಿದರು. ಅವರ ಸೂಚನೆಯಂತೆ ಕಳೆದ ಆರು ತಿಂಗಳ ಹಿಂದಿನಿಂದ ಯೋಜನೆಯ ಪರೀಕ್ಷೆಗೆ ಚಾಲನೆ ನೀಡಿದೆವು. ಕ್ಷಿಪಣಿ ಪರೀಕ್ಷೆಗಾಗಿಯೇ ಕಳೆದ ಜನವರಿ 24ರಂದು ಮೈಕ್ರೋ ಸ್ಯಾಟೆಲೈಟ್ ಉಡಾವಣೆ ಮಾಡಿದ್ದೆವು. ಈ ಯೋಜನೆಯಲ್ಲಿ ನೂರಕ್ಕೂ ಅಧಿಕ ಹಿರಿಯ ವಿಜ್ಞಾನಿಗಳು ಕೆಲಸ ಮಾಡಿದ್ದು, ಹಗಲು ರಾತ್ರಿ ಎನ್ನದೇ ಈ ಯೋಜನೆಯ ಯಶಸ್ಸಿಗಾಗಿ ದುಡಿದಿದ್ದಾರೆ.
ಕ್ಷಿಪಣಿಯನ್ನು ಒಡಿಶಾದ ಬಾಲಾಸೋರ್ ನಿಂದ ಬೆಳಗ್ಗೆ 11.16ಕ್ಕೆ ಉಡಾವಣೆ ಮಾಡಲಾಗಿತ್ತು. ಉಡಾವಣೆಯಾದ ಕೇವಲ 3 ನಿಮಿಷಗಳ ಅವಧಿಯಲ್ಲಿ ಕ್ಷಿಪಣಿ ನಿಗದಿಪಡಿಸಲಾಗಿದ್ದ ಸುಮಾರು 300 ಕಿ.ಮೀ ದೂರದ ಭೂಮಿಯ ಕೆಳ ಕಕ್ಷೆಯಲ್ಲಿದ್ದ ಗುರಿಯನ್ನು ಅತ್ಯಂತ ಕರಾರುವಕ್ಕಾಗಿ ತಲುಪಿ ಧ್ವಂಸ ಮಾಡಿದೆ. ಆ ಮೂಲಕ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಅಂತೆಯೇ ಎ-ಸ್ಯಾಟ್ ಕ್ಷಿಪಣಿ 1 ಸಾವಿರ ಕಿ.ಮೀ ಗೂ ಅಧಿಕ ದೂರದಲ್ಲಿರುವ ಗುರಿಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಸತೀಶ್ ರೆಡ್ಡಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com