ಮೂವರು ಅಪ್ರಾಪ್ತರ ಅತ್ಯಾಚಾರ, ಕೊಲೆ.. ವೇಶ್ಯೆಯನ್ನೂ ಬಿಡದ ಕಾಮುಕನ ಬಂಧನ!

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮಹಿಳೆಯರ ಪಾಲಿಗೆ ದುಃಸ್ವಪ್ನವಾಗಿದ್ದ ಸೀರಿಯಲ್ ರೇಪಿಸ್ಟ್, ಸೀರಿಯಲ್ ಕಿಲ್ಲರ್ ಓರ್ವನನ್ನು ಕೊನೆಗೂ ಬಂಧಿಸುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಹೈದರಾಬಾದ್: ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮಹಿಳೆಯರ ಪಾಲಿಗೆ ದುಃಸ್ವಪ್ನವಾಗಿದ್ದ ಸೀರಿಯಲ್ ರೇಪಿಸ್ಟ್, ಸೀರಿಯಲ್ ಕಿಲ್ಲರ್ ಓರ್ವನನ್ನು ಕೊನೆಗೂ ಬಂಧಿಸುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು.. ಮೂವರು ಅಪ್ರಾಪ್ತೆಯರನ್ನು ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭೋಂಗೀರ್‌ ಜಿಲ್ಲೆಯ ಹಾಜಿಪುರ ಗ್ರಾಮದಲ್ಲಿ ನಡೆದಿತ್ತು. ಅಂತೆಯೇ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಹಿಳೆಯನ್ನು ಕೂಡ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ 28 ವರ್ಷದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಈ ಸಿರಿಯಲ್ ರೇಪಿಸ್ಟ್ ಮತ್ತು ಕೊಲೆಗಾರನನ್ನು  ಮರ್ರಿ ಶ್ರೀನಿವಾಸ ರೆಡ್ಡಿ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ ಮೂಲದವನಾದ ಈತ ಮದ್ಯವ್ಯಸನಿಯಾಗಿದ್ದ ಮತ್ತು ಅಶ್ಲೀಲ ಚಿತ್ರಗಳಿಗೆ ದಾಸನಾಗಿದ್ದ ಎಂದು ರಾಚಕೊಂಡ ಪೊಲೀಸ್‌ ಕಮೀಷನರ್‌ ಮಹೇಶ್‌ ಭಾಗವತ್‌ ತಿಳಿಸಿದ್ದಾರೆ.
ಈ ಹಿಂದೆ ತೆಲಂಗಾಣದ ಯಾದಾದ್ರಿ ಭೋಂಗೀರ್‌ ಜಿಲ್ಲೆಯ ಹಾಜಿಪುರ ಗ್ರಾಮದಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಈ ಪಾಪಿ ಅತ್ಯಾಚಾರ ಮಾಡಿ ಬಳಿಕ ಅವರನ್ನು ಕೊಂದು ಊರ ಹೊರಗಿನ ಜಮೀನಿನಲ್ಲಿದ್ದ ಬಾವಿಯೊಳಗೆ ಹಾಕುತ್ತಿದ್ದ. ಅಲ್ಲದೆ  ಕರ್ನೂಲ್‌ ಜಿಲ್ಲೆಯಲ್ಲಿ ಮಾಂಸದಂಧೆಯಲ್ಲಿ ತೊಡಗಿದ್ದ ಮಹಿಳೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನೂ ಕೊಂದು ಆಕೆಯ ಮನೆಯ ನೀರಿನ ತೊಟ್ಟಿಯಲ್ಲೇ ಹಾಕಿದ್ದ. ಅಲ್ಲದೆ ಕಳೆದ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿಯ ಮೃತದೇಹ ಗ್ರಾಮದ ಹೊರವಲಯದ ಬಾವಿಯಲ್ಲಿ ಪತ್ತೆಯಾಗಿದ್ದರೆ, ಕಳೆದ ಮಾರ್ಚ್‌ ನಲ್ಲಿ ನಾಪತ್ತೆಯಾಗಿದ್ದ ಅದೇ ಗ್ರಾಮದ 17 ವರ್ಷದ ಬಾಲಕಿಯ ಅಸ್ಥಿಪಂಜರವು ಕೂಡ ಅದೇ ಬಾವಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 28 ವರ್ಷದ ಮರ್ರಿ ಶ್ರೀನಿವಾಸ ರೆಡ್ಡಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆತನನ್ನು ಪ್ರಾಥಮಿಕ ವಿಚಾರಣೆಗೊಳಪಡಿಸಿದ್ದು, ಈ ಹಿಂದಿನ ಪ್ರಕರಣಗಳಲ್ಲದೇ ಈತ 2015ರಲ್ಲಿ ನಾಪತ್ತೆಯಾಗಿದ್ದ ಮೈಸಿರೆಡ್ಡಿಪಲ್ಲೆ ಗ್ರಾಮದ 12 ವರ್ಷದ ಬಾಲಕಿಯನ್ನು ಕೂಡ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.  ಅಂತೆಯೇ ಮೃತ ದೇಹಗಳನ್ನು ಊರ ಹೊರಗಿನ ಬಾವಿಯೊಳಗೆ ಹಾಕಿರುವುದಾಗಿ ಹೇಳಿದ್ದಾನೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಸ್ಥಳೀಯರ ನೆರವಿನೊಂದಿಗೆ ಗ್ರಾಮದ ಹೊರವಲಯದಲ್ಲಿದ್ದ ಬಾವಿಯನ್ನು ಪೊಲೀಸರು ಪತ್ತೆಹಚ್ಚಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. 
ಸ್ಕೂಲ್ ಬ್ಯಾಗ್ ನೀಡಿದ್ದ ಸುಳಿವಿನಿಂದಾಗಿ ಆರೋಪಿ ಬಂಧನ
ಇನ್ನು ಈ ಹಿಂದೆ ಶಾಲೆಯಿಂದ ಮರಳುತ್ತಿದ್ದ 14 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಪೊಲೀಸರಿಗೆ ಈ ಮರ್ರಿ ಶ್ರೀನಿವಾಸ ರೆಡ್ಡಿಯ ಬೃಹತ್ ಬ್ರಹ್ಮಾಂಡ ಅಪರಾಧ ಪ್ರಕರಣಗಳು ತಿಳಿದುಬಂದಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ ಶ್ರೀನಿವಾಸ ರೆಡ್ಡಿ, ಬಾಲಕಿಗೆ ಲಿಫ್ಟ್‌ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬಾಲಕಿ ಕಾಣೆಯಾದ ಕುರಿತು ಪಾಲಕರು ನೀಡದ್ದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಬಾವಿಯ ಸಮೀಪದಲ್ಲಿ ಶಾಲೆಯ ಬ್ಯಾಗ್‌ ದೊರಕಿದೆ. ತನಿಖೆ ಮುಂದುವರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2015ರಲ್ಲೂ ಇನ್ನಿಬ್ಬರು ಅಪ್ರಾಪ್ತೆಯರು ಮತ್ತು ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಹಾಜಿಪುರ ಗ್ರಾಮಸ್ಥರು ಶ್ರೀನಿವಾಸ ರೆಡ್ಡಿಯ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಪೊಲೀಸರೇ ಹತ್ಯೆ ಮಾಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಆತನ ಒಂದು ಬೈಕ್‌, ಎರಡು ಮೊಬೈಲ್‌ ಫೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಇದೀಗ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com