ನವದೆಹಲಿ: ನಿರ್ಣಾಯಕ ಹಂತ ತಲುಪಿರುವ ಅಯೋಧ್ಯೆ ಪ್ರಕರಣದ ತೀರ್ಪು ಬರೆಯಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತಮ್ಮ ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಅಯೋಧ್ಯಾ ರಾಮಮಂದಿರ -ಬಾಬ್ರಿ ಕಟ್ಟಡ ಭೂವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿನ್ನೆಯೇ ಅಂತ್ಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನವೆಂಬರ್ 17ಕ್ಕೆ ನಿವೃತ್ತರಾಗಲಿದ್ದು ಅಷ್ಟರೊಳಗೆ ಅಯೋಧ್ಯಾ ತೀರ್ಪು ಹೊರಬೀಳುವುದು ನಿಶ್ಚಿತವಾಗಿದೆ.
ಏತನ್ಮಧ್ಯೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು, ಐತಿಹಾಸಿಕ ತೀರ್ಪು ಬರೆಯುವುದಕ್ಕೋಸ್ಕರ ತಮ್ಮ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ಮೂಲಗಳ ಪ್ರಕಾರ ಸಿಜಿಐ
ರಂಜನ್ ಗೊಗೊಯ್ ಅವರು ದಕ್ಷಿಣ ಅಮೆರಿಕ ಸೇರಿ ಕೆಲವು ದೇಶಗಳಿಗೆ ಪ್ರವಾಸ ಹೋಗಬೇಕಿತ್ತು. ಈ ಕುರಿತಂತೆ ವೇಳಾಪಟ್ಟಿ ಕೂಡ ಸಿದ್ಧವಾಗಿತ್ತು. ಆದರೆ ಅಯೋಧ್ಯೆ ತೀರ್ಪು ಪ್ರಕಟ ಹಿನ್ನಲೆಯಲ್ಲಿ ಅವರು ವಿದೇಶ ಪ್ರವಾಸವನ್ನು ರದ್ದು ಮಾಡಿದ್ದಾರೆ. ಗಗೋಯ್ ಅವರು ನವೆಂಬರ್ 17ಕ್ಕೆ ನಿವೃತ್ತರಾಗುವುದಕ್ಕೂ ಮೊದಲು ಅಯೋಧ್ಯೆಯ ತೀರ್ಪನ್ನು ನೀಡಬೇಕಾದ ಕಾರಣ, ಕೂಲಂಕುಷ ಅಧ್ಯಯನ ಮಾಡಿ ತೀರ್ಪು ಬರೆಯಬೇಕಿದೆ. ಇದೇ ಕಾರಣಕ್ಕೆ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಅಯೋಧ್ಯೆ ತೀರ್ಪು ಅಂತಿಮವಾಗುವವರೆಗೂ ತಾವೆಲ್ಲೂ ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
Advertisement