ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ: ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ
ಚಂಡೀಘಡ: ಹಾಲಿ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಹೊರತಾಗಿಯೂ ಅಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ಹೊತ್ತಿನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹೂಡಾ, 'ರಾಜ್ಯದ ಜನ ಬಿಜೆಪಿ ವಿರುದ್ಧ ಮತ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ಪಕ್ಷೇತರರು ಮತ್ತು ಜೆಜೆಪಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಅಧಿಕಾರ ಅವಕಾಶವಿಲ್ಲದ ಬಿಜೆಪಿ ಪಕ್ಷೇತರ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ ಎಂದೂ ಹೂಡಾ ಆರೋಪಿಸಿದ್ದಾರೆ.
90 ಸ್ಥಾನದ ಹರ್ಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯತೆ ಇದ್ದು, ಬಿಜೆಪಿ ಮೈತ್ರಿಕೂಟ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಹರ್ಯಾಣದಲ್ಲಿ ಇತರೆ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದ್ದು, ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ. ಈ ಪೈಕಿ ದುಷ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಾರ್ಟಿ, 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ಕಾರಣಕ್ಕೆ ಹರ್ಯಾಣದಲ್ಲಿ ಜೆಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ