ನಿವೃತ್ತಿ ಸೌಲಭ್ಯಕ್ಕಾಗಿ ಅಲೆದಾಡುತ್ತಿದ್ದಾರೆ ಸರ್ಕಾರಕ್ಕೆ ಸವಾಲಾಗಿದ್ದ ದಿಟ್ಟ ಅಧಿಕಾರಿ ಅಲೋಕ್ ವರ್ಮಾ!
ನವದೆಹಲಿ: ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಅಧಿಕಾರಿಗಳೂ ಕೂಡ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ದೇಶದಲ್ಲಿಯೇ ಅತ್ಯಂತ ಕಠಿಣ ಪೊಲೀಸ್ ಅಧಿಕಾರಿ, ಸಿಬಿಐನಲ್ಲಿ ದಿಟ್ಟ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರು ನಿವತ್ತಿ ಸೌಲಭ್ಯಕ್ಕಾಗಿ ಅಲೆದಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಸೇರಿದಂತೆ ಸಾಮಾನ್ಯ ನಿವೃತ್ತಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದ 1979ನೇ ಬ್ಯಾಂಚ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಲೆದಾಡುತ್ತಿದ್ದಾರೆಂದು ತಿಳಿದುಬಂದಿದೆ.
ಅ.14 ರಂದು ಗೃಹ ಸಚಿವಾಲಯಕ್ಕೆ ಪತ್ರವೊಂದು ಬಂದಿದ್ದು, ಪತ್ರದ ಮಾಹಿತಿಗಳು ಇದೀಗ ಬಹಿರಂಗಗೊಂಡಿದೆ. ಸರ್ಕಾರಿ ಸೇವೆಗಳಲ್ಲಿ ಉಲ್ಲಂಘನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವರ್ಮಾ ಅವರ ನಿವೃತ್ತಿ ಸೌಲಭ್ಯಗಳನ್ನು ಸರ್ಕಾರ ತಡೆಹಿಡಿದಿದೆ ಎಂದು ತಿಳಿದುಬಂದಿದೆ.
ವರ್ಮಾ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ್ದು, ಕರ್ತವ್ಯಕ್ಕೆ ಹಾಜರಾಗದ 11-1-2019 ರಿಂದ 31-1-2019ರವರೆಗೂ ವರ್ಮಾ ಅವರು ಕರ್ತವ್ಯ ನಿರ್ವಹಿಸಿದ್ದಾರೆಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಇದರ ಅರ್ಥ ಅನಧಿಕೃತ ರಜೆಯನ್ನು ಸೇವೆಗೆ ವಿದಾಯವೆಂದು ಪರಿಗಣಿಸಲ್ಪಡುತ್ತದೆ. ಇದರ ಪರಿಣಾಮ ವರ್ಮಾ ಅವರು ನಿವೃತ್ತಿಯ ಪ್ರಯೋಜನೆಗಳನ್ನು ಕಳೆದುಕೊಳ್ಳುತ್ತಾರೆ.
ವರ್ಮಾ ಅವರ ಆಪ್ತರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿದ್ದರೂ, ಯಾವುದೇ ತನಿಖೆ ಎದುರಿಸುತ್ತಿದ್ದರೂ, ಜಿಪಿಎಫ್ ತಡೆಹಿಡಿಯುವಂತಿಲ್ಲ. ಜಿಪಿಎಫ್ ನಿಧಿಯಾಗಿದ್ದು, ಸರ್ಕಾರಿ ನೌಕರನು ತನ್ನ ಸಂಬಂಳದ ನಿರ್ದಿಷ್ಟ ಶೇಕಡಾವಾರುಗಳನ್ನು ಸಂಗ್ರಹಿಸಿರುತ್ತಾನೆ. ನಿವೃತ್ತಿ ಪಡೆಯುವ ವೇಳೆ ಆ ಹಣವನ್ನು ನೌಕನಿಗೆ ನೀಡುತ್ತಾರಷ್ಟೆ ಎಂದು ಹೇಳಿದ್ದಾರೆ.
ಇನ್ನು ಸ್ವತಃ ವರ್ಮಾ ಅವರೇ ಕಳೆದ ಜುಲೈ ತಿಂಗಳಿನಲ್ಲಿ ಸರ್ಕಾರಕ್ಕೆ ಬರೆದಿದ್ದು, ಜಿಪಿಎಫ್ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಈ ನಿಧಿಯನ್ನು ಬಿಡುಗಡೆ ಮಾಡದ ಗೃಹ ಇಲಾಖೆ ಕಾನೂನು ವ್ಯವಹಾರ ಇಲಾಖೆಯ ಸಲಹೆಗಳನ್ನು ಕೇಳಿದೆ.
ಜಿಪಿಎಫ್ ಹಾಗೂ ಇತರ ಪ್ರಯೋಜನಗಳಿಗೆ ಸಂಬಂಧಿಸಿದ ವರ್ಮಾ ಅವರ ಪ್ರಕರಣದ ನಿರ್ಧಾರ ಸಂಬಂಧಪಟ್ಟಂತಹ ಸಚಿವಾಲಯಗಳಲ್ಲಿ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಸಿಬಿಐ ನಲ್ಲಿ ನಡೆದಿದ್ದ ಒಳಜಗಳ ಕೆಲ ದಿನಗಳ ಹಿಂದಷ್ಟೇ ಬಹಿರಂಗಗೊಂಡಿತ್ತು. ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ನಡುವಿನ ಆಂತರಿಕ ಕಲಹ ಉಂಟಾಗಿ, ಇಬ್ಬರ ಜಗಳ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಅವರನ್ನು 2018ರ ಅಕ್ಟೋಬರ್ 23ರಂದು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು. ಇದನ್ನು ವಿರೋಧಿಸಿ ಅಲೋಕ್ ವರ್ಮಾ ಕಾನೂನು ಹೋರಾಟ ನಡೆಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಲೋಕ್ ವರ್ಮಾ ವಿರುದ್ಧದ ಆರೋಪಗಳ ಕುರಿತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳಬೇಕು. ಅಲ್ಲಿಯವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಿರ್ಬಂಧ ಹೇರಿತ್ತು. ಈ ತೀರ್ಪಿನಿಂದಾಗಿ ಅಲೋಕ್ ವರ್ಮಾ 77 ದಿನಗಳ ಬಳಿಕ ಮತ್ತೆ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿು ಕಚೇರಿಗೆ ಮರಳಿದ್ದರು.
ಅಲೋಕ್ ವರ್ಮಾ ರಜೆಯ ಮೇಲಿದ್ದ ವೇಳೆಯೇ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ ಅವರನ್ನುೋ ನೇಮಿಸಲಾಗಿತ್ತು. ಈ ವೇಳೆ ವರ್ಮಾ ಆಪ್ತರಾದ 10 ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ನಾಗೇಶ್ವರ ರಾವ್ ಸಹಿ ಹಾಕಿದ್ದರು. ಕಾನೂನು ಸಮರದ ಬಳಿಕ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವರ್ಮಾ ಅವರು ಬಹುತೇಕ ವರ್ಗಾವಣೆಗಳನ್ನು ರದ್ದು ಮಾಡಿದ್ದರು. ಸುಪ್ರೀಂಕೋರ್ಟ ಯಾವುದೇ ನಿರ್ಧಾರನಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. ಆದೇಶಗಳನ್ನು ರದ್ದು ಮಾಡಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.


