ಮಹಾರಾಷ್ಟ್ರದಲ್ಲಿ ಇನ್ನೂ ಮುಗಿಯದ ಅಧಿಕಾರದ ಹಗ್ಗಜಗ್ಗಾಟ: ಸರ್ಕಾರ ರಚನೆ ವಿಳಂಬ
ಮುಂಬೈ: ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ-ಶಿವಸೇನೆ ಮೈತ್ರಿಕೂಟದ ನಡುವೆ ನಡೆದಿರುವ ಸಂಘರ್ಷವು ರಾಜ್ಯದಲ್ಲಿ ನೂತನ ಸರ್ಕಾರ ರಚನೆಯನ್ನು ವಿಳಂಬ ಮಾಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಮುಖ್ಯಮಂತ್ರಿ ಹುದ್ದೆ 50:50 ಸೂತ್ರದ ಅನುಸಾರ ಹಂಚಿಕೆಯಾಗಬೇಕು. 5 ವರ್ಷದಲ್ಲಿ ಎರಡೂವರೆ ವರ್ಷ ಶಿವಸೇನೆಯವರಿಗೆ ಸಿಎಂ ಹುದ್ದೆ ನೀಡಬೇಕು. ಉಳಿದ 2.5 ವರ್ಷ ಬಿಜೆಪಿಗೆ ಹೋಗಬೇಕು. ಈ ಬಗ್ಗೆ ಬಿಜೆಪಿ ತನ್ನ ಲೆಟರ್ ಹೆಡ್'ನಲ್ಲಿ ಲಿಖಿತ ಭರವಸೆ ನೀಡಬೇಕು. ಆದಿತ್ಯ ಠಾಕ್ರೆಯವರನ್ನೇ ಹೊಸ ಮುಖ್ಯಮಂತ್ರಿಯಾಗಿ ಘೋಷಿಸಬೇಕೆಂದು ಶಿವಸೇನೆಯ ಉದ್ಧವ್ ಠಾಕ್ರೆ ಆಗ್ರಹಿಸಿದ್ದರೆ. ಇದಕ್ಕೆ ಬಿಜೆಪಿ ಮಣಿಯುವ ಲಕ್ಷಣಗಳು ಕಾಣುತ್ತಿಲ್ಲ
ಈ ನಡುವೆ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಿರಸ್ಕರಿಸಿದ್ದಾರೆ. ಮುಂದಿನ 5 ವರ್ಷ ಬಿಜೆಪಿ ನಾಯಕತ್ವದಲ್ಲಿ ಸ್ಥಿರ ಸರ್ಕಾರ ಕೊಡುತ್ತೇವೆಂದು ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ದೇವೇಂದ್ರ ಫಡ್ನವೀಸ್ ಅಧಿಕಾರ ಹಂಚಿಕೆ ಕುರಿತಂತೆ ಮಾತುಕತೆ ನಡೆಸಿದ್ದರು. 50:50 ಫಾರ್ಮೂಲಾ ಬಗ್ಗೆ ಚರ್ಚಿಸಿದ್ದರು. ಅಧಿಕಾರ ಸಮಾನವಾಗಿ ಹಂಚಿಕೊಳ್ಳುವುದು, ಮುಖ್ಯಮಂತ್ರಿ ಸ್ಥಾನ ಎರಡೂ ಪಕ್ಷಗಳಿಗೂ ಮುಖ್ಯವಾದದ್ದು. ಉಪ ಮುಖ್ಯಮಂತ್ರಿ ಸ್ಥಾನ ನಂತರದ್ದು. ಬಿಜೆಪಿ 50:50 ಫಾರ್ಮುಲಾಗೆ ಒಪ್ಪಿಕೊಂಡಿರುವ ಕುರಿತು ಪತ್ರದಲ್ಲಿ ಬರೆದುಕೊಡಬೇಕು ಎಂದು ಶಿವನಸೇನೆ ನಾಯಕ ಪ್ರತಾಸ್ ಸರ್ನೈಕ್ ಅವರು ಹೇಳಿದ್ದಾರೆ.
1995-1999ರಲ್ಲಿ ಮನೋಹರ್ ಜೋಷಿ ಹಾಗೂ ನಾರಾಯಣ್ ರಾಣೆಯವರು ಇಬ್ಬರೂ ಮುಖ್ಯಮಂತ್ರಿಗಳಾಗಿದ್ದರು. ನಮ್ಮ ಆಗ್ರಹಕ್ಕೆ ಒಪ್ಪದೇ ಹೋದಲ್ಲಿ, ನಮ್ಮ ಬಳಿ ಬೇರೆ ಆಯ್ಕೆ ಕೂಡ ಇದೆ. ನಾವು ಅಂತಹ ಸ್ಥಾನದಲ್ಲಿದ್ದೇವೆ. ಬಿಜೆಪಿ ಮೈತ್ರಿಯಿಂದ ಹೊರಬಂದರೆ, ಕಾಂಗ್ರೆಸ್ ಹಾಗೂ ಎನ್'ಸಿಪಿ ನಮ್ಮೊಂದಿಗೆ ಕೈಜೋಡಿಸಲು ಸಿದ್ಧರಿದ್ದಾರೆಂದು ತಿಳಿಸಿದ್ದಾರೆ.
ಮಾಧ್ಯಮಗಳ ಮೂಲಕ ಮಾತುಕತೆ ನಡೆಸುವ ಬಗ್ಗೆ ಚರ್ಚಿಸುವುದು ಬೇಡ. ಸಂಬಂಧಪಟ್ಟಂತಹ ನಾಯಕರು, ಸೂಕ್ತ ಸಮಯದಲ್ಲಿ ಪಕ್ಷದ ದೃಷ್ಟಿಕೋನಗಳ ಬಗ್ಗೆ ಮಾಹಿತಿ ನೀಡುತ್ತಾರೆಂದು ಬಿಜೆಪಿ ವಕ್ತಾರ ಮಾಧವ್ ಬಂಢಾರಿಯವರು ಹೇಳಿದ್ದಾರೆ.
ಈ ನಡುವೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು, ಶಾಸಕಾಂಗ ಪಕ್ಷದ ಸಭೆಯನ್ನು ಬುಧವಾರ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ