ಮೋದಿಯಲ್ಲ, ಗಾಂಧೀಜಿ ಮಾತ್ರ ದೇಶದ ಪಿತಾಮಹ: ಫಡ್ನವೀಸ್ ಪತ್ನಿ ವಿರುದ್ದ ಖರ್ಗೆ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಸಂಭೋದಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಅವರ ವಿರುದ್ದ ತೀವ್ರ ವಾಗ್ದಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ ಅವರಿಗೆ ಮಾತ್ರ ರಾಷ್ಟ್ರಪಿತ ಎಂಬ ಬಿರುದು ನೀಡಲಾಗಿದೆ ಎಂದು ಬುಧವಾರ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಸಂಭೋದಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಅವರ ವಿರುದ್ದ ತೀವ್ರ ವಾಗ್ದಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ ಅವರಿಗೆ ಮಾತ್ರ ರಾಷ್ಟ್ರಪಿತ ಎಂಬ ಬಿರುದು ನೀಡಲಾಗಿದೆ ಎಂದು ಬುಧವಾರ ತಿರುಗೇಟು ನೀಡಿದ್ದಾರೆ.

ಮಹಾತ್ಮ ಗಾಂಧಿ ಮಾತ್ರವೇ ರಾಷ್ಟ್ರಪಿತ. ಮೋದಿ ಅವರನ್ನು ಮೆಚ್ಚಿಸಲು, ಪ್ರಚಾರ ಪಡೆಯಲು ಇಂತಹ ಹೇಳಿಕೆಗಳನ್ನು ಅಮೃತ ಅವರು ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಬಿಜೆಪಿಯವರು ಭಾವಿಸುವುದಾದರೆ ಅವರು ಹಾಗೆಯೇ ಕರೆದುಕೊಳ್ಳಲಿ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ. 

ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಅಂಗವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಪತ್ನಿ ಅಮೃತಾ ಫಡ್ನವಿಸ್​ ಅವರ ಶುಭ ಹಾರೈಕೆ ಈಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಶುಭಹಾರೈಕೆಯ ಸಂದೇಶದಲ್ಲಿ ಅಮೃತಾ ಫಡ್ನವಿಸ್ ಅವರು ಪ್ರಧಾನಿ ಅವರನ್ನು ದೇಶದ ರಾಷ್ಟಪಿತ ಎಂದು ಹೇಳಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

"ಸಮಾಜ ಸುಧಾರಣೆಗಾಗಿ ಕೆಲಸ ಮಾಡುವಂತೆ ನಮಗೆ ಪ್ರೇರೇಪಿಸುವ, ನಮ್ಮ ದೇಶದ ರಾಷ್ಟ್ರಪಿತ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಅಮೃತಾ ಫಡ್ನವಿಸ್ ಟ್ವೀಟ್ ಮಾಡಿ​ ಶುಭ ಕೋರಿದ್ದರು.

ಮೋದಿಯವರನ್ನು ನಮ್ಮ ದೇಶದ ರಾಷ್ಟ್ರಪಿತ ಎಂದು ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ನಿ ಅಮೃತಾ ಫಡ್ನವಿಸ್​ ಅವರ ಈ ಟ್ವೀಟ್​​ಗೆ​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಮಹಾತ್ಮ ಗಾಂಧೀಜಿ ಮಾತ್ರ ನಮ್ಮ ರಾಷ್ಟ್ರಪಿತ ಎಂದು ಹಲವು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com