ವಿಮಾನ ನಿಲ್ದಾಣದಲ್ಲಿಯೇ ಅಮೆರಿಕ ಅಧ್ಯಕ್ಷರಿಂದ ಸ್ವಾಗತ ಪಡೆದ ಭಾರತದ ಪ್ರಧಾನಿ ನೆಹರೂ ಮಾತ್ರ: ಶಶಿ ತರೂರ್

ವಿಮಾನ ನಿಲ್ದಾಣದಲ್ಲಿಯೇ ಅಮೆರಿಕ ಅಧ್ಯಕ್ಷರಿಂದ ಸ್ವಾಗತ ಪಡೆದ ಭಾರತದ ಪ್ರಧಾನಿ ನೆಹರೂ ಮಾತ್ರ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ವಿಮಾನ ನಿಲ್ದಾಣದಲ್ಲಿಯೇ ಅಮೆರಿಕ ಅಧ್ಯಕ್ಷರಿಂದ ಸ್ವಾಗತ ಪಡೆದ ಭಾರತದ ಪ್ರಧಾನಿ ನೆಹರೂ ಮಾತ್ರ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ 'ಹೌಡಿ-ಮೋದಿ' ಕಾರ್ಯಕ್ರಮಕ್ಕೆ ಟಾಂಗ್ ಕೊಡುವ ನಿಟ್ಟಿನಲ್ಲಿ ಟ್ವೀಟ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಮಾಜಿ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರೂ ಅವರ ಕುರಿತಂತೆ ಟ್ವೀಟ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಅಮೆರಿಕ ಅಧ್ಯಕ್ಷರಿಂದ ಸ್ವಾಗತ ಪಡೆದ ಭಾರತದ ಪ್ರಧಾನಿ ನೆಹರೂ ಮಾತ್ರ. ಈ ಸನ್ನಿವೇಶ ಎರಡು ಬಾರಿ ಘಟಿಸಿತ್ತು. 1949ರಲ್ಲಿ ಅಂದಿನ ಅಧ್ಯಕ್ಷ ಹ್ಯಾರಿ ಎಸ್ ಟ್ರುಮನ್ ಮತ್ತು 1961ರಲ್ಲಿ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅಂದಿನ ಭಾರತದ ಪ್ರಧಾನಿ ಜವಹರ್ ಲಾಲ್ ನೆಹರೂ ಅವರನ್ನು ಖುದ್ಧು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದ್ದರು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಇನ್ನು ನಿನ್ನೆ 'ಹೌಡಿ-ಮೋದಿ' ಕಾರ್ಯಕ್ರಮಕ್ಕೆ ಟಾಂಗ್ ಕೊಡುವ ನಿಟ್ಟಿನಲ್ಲಿ ಟ್ವೀಟ್ ಮಾಡಿದ್ದ ತರೂರ್, '1954ರಲ್ಲಿ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಅವರ ಮಗಳು ಇಂದಿರಾ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದ ಚಿತ್ರ. ಯಾವುದೇ ವಿಶೇಷ ಪಿಆರ್ ಪ್ರಚಾರವಿಲ್ಲದೆ, ಎನ್‌ಆರ್‌ಐ ಗುಂಪು ನಿರ್ವಹಣೆಯಿಲ್ಲದೆ ಅಥವಾ ಮಾಧ್ಯಮಗಳ ವಿಜೃಂಭಣೆಯ ಪ್ರಚಾರವಿಲ್ಲದೆ ಅಮೆರಿಕದ ಜನರಲ್ಲಿ ಆ ಕ್ಷಣದಲ್ಲಿ ಹುಟ್ಟಿಕೊಂಡಿದ್ದ ಭಾರಿ ಉತ್ಸಾಹವನ್ನು ನೋಡಿ' ಎಂದು ಹೇಳಿದ್ದರು. ಅಲ್ಲದೆ ನೆಹರೂ ಜೊತೆ ಇದ್ದ ಇಂದಿರಾ ಅವರನ್ನು ಇಂಡಿಯಾ ಎಂದು ತಪ್ಪಾಗಿ ಬರೆದಿದ್ದರು. ತರೂರ್ ಅವರ ಈ ಟ್ವೀಟ್ ವ್ಯಾಪಕ ಟ್ರೋಲ್ ಆಗಿತ್ತು. 

ತರೂರ್ ತಪ್ಪುಗಳನ್ನು ಹುಡುಕಿ ಟೀಕಿಸಿದ್ದ ಟ್ವೀಟಿಗರು, ಇಂದಿರಾ ಗಾಂಧಿ ನಮಗೆ ಗೊತ್ತು, ಇಂಡಿಯಾ ಗಾಂಧಿ ಯಾರು ಎಂದು ಅನೇಕರು ಪ್ರಶ್ನಿಸಿದ್ದಾರೆ. 'ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ' ಎಂಬ ಮಾತು ಒಂದುಕಾಲದಲ್ಲಿತ್ತು. ತರೂರ್ ಅವರು ಈಗಲೂ ಅದೇ ಜಪ ಮಾಡುತ್ತಿದ್ದಾರೆ. ದೇಶ ಬದಲಾಗಿದೆ, ಕಣ್ತೆರೆದು ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ತರೂರ್ ಹಾಕಿದ್ದ ಫೋಟೋಗಳ ಕುರಿತೂ ತಮಾಷೆ ಮಾಡಿರುವ ಟ್ವೀಟಿಗರು, ವಾಸ್ತವವಾಗಿ ಶಶಿ ತರೂರ್ ಅವರು ಹಂಚಿಕೊಂಡ ಚಿತ್ರಕ್ಕೂ ಮತ್ತು ಅವರು ಬರೆದಿರುವ ಪೋಸ್ಟ್‌ ಗೂ ಸಂಬಂಧವಿಲ್ಲ. ಅದು 1955ರಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಯುಎಸ್‌ಎಸ್‌ಆರ್‌ನ (ಈಗಿನ ರಷ್ಯಾ) ಮಾಸ್ಕೋಗೆ ತೆರಳಿದ್ದ ಚಿತ್ರವಾಗಿದೆ. ಆಗ ಸಾರ್ವಜನಿಕ ರಾಲಿಯಲ್ಲಿ ತೆರೆದ ಕಾರಿನಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ತೆರಳಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ಹಿರಿಯ ರಾಜಕಾರಣಿಯಾದ ನೀವು ಫೋಟೊ ಒಂದನ್ನು ಖಚಿತಪಡಿಸಿಕೊಳ್ಳದೆ ಹಾಕುತ್ತೀರಲ್ಲ ಎಂದು ಕೆಲವರು ಕಿಡಿಕಾರಿದ್ದರೆ, ಯಾವುದೇ ಪಿಆರ್ ಪ್ರಚಾರವಿಲ್ಲದೆ ಇಷ್ಟು ಜನ ಸೇರಿದ್ದರು ಎಂದು ಮೋದಿ ಅವರನ್ನು ಟೀಕಿಸಲು ಹೇಳಿದ್ದೀರಿ. ಆದರೆ ನೆಹರೂ ಅವರು ತೆರಳಿರುವ ತೆರೆದ ಕಾರ್ ನೋಡಿ. ಅದು ವ್ಯವಸ್ಥಿತ ಪಿಆರ್ ಪ್ರಚಾರದ ಮೂಲಕವೇ ನಡೆದಿದೆ ಎಂದು ಅನೇಕರು ಹೇಳಿದ್ದಾರೆ. ಆಗಿನ ಕಾಲದಲ್ಲಿ ಯುಎಸ್‌ಎಸ್‌ಆರ್ ಸರ್ಕಾರವು ವಿದೇಶಿ ನಾಯಕರನ್ನು ಸ್ವಾಗತಿಸಲು ರ್ಯಾಲಿಗಳನ್ನು ನಡೆಸುವ ಸಂಪ್ರದಾಯ ಹೊಂದಿದ್ದರು ಎಂದು ಕೆಲವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com