ಮಹಾರಾಷ್ಟ್ರ: ವೋರ್ಲಿ ಕ್ಷೇತ್ರದಿಂದ ಚುನಾವಣೆಗೆ ಪದಾರ್ಪಣೆ ಮಾಡಲಿರುವ ಆದಿತ್ಯಾ ಠಾಕ್ರೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯಾ ಠಾಕ್ರೆ ಸ್ಪರ್ಧೆ ಖಚಿತವಾಗಿದೆ.
ಆದಿತ್ಯಾ ಠಾಕ್ರೆ (ಸಂಗ್ರಹ ಚಿತ್ರ)
ಆದಿತ್ಯಾ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯಾ ಠಾಕ್ರೆ ಸ್ಪರ್ಧೆ ಖಚಿತವಾಗಿದೆ.

ಮೂಲಗಳ ಪ್ರಕಾರ ಹಾಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮೂಲಕ ಆದಿತ್ಯಾ ಠಾಕ್ರೆ  ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದು, ಮುಂಬೈನ ವೋರ್ಲಿ ಕ್ಷೇತ್ರದಿಂದ ಆದಿತ್ಯಾ ಠಾಕ್ರೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಶಿವಸೇನೆಯ ಸುನಿಲ್ ಶಿಂಡೆ ಪ್ರತಿನಿಧಿಸುತ್ತಿರುವ ಮುಂಬೈನ ವೋರ್ಲಿ ಕ್ಷೇತ್ರ ಶಿವಸೇನೆಯ ಭದ್ರಕೋಟೆ ಎಂದೇ ಕರೆಯಲಾಗುತ್ತಿದೆ. ಇದೇ ಕಾರಣಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಪುತ್ರನನ್ನು ಇದೇ ವೋರ್ಲಿ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಆ ಮೂಲಕ ಠಾಕ್ರೆ ಕುಟುಂಬದಿಂದ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊಟ್ಟ ಮೊದಲ ಸದಸ್ಯ ಎಂಬ ಕೀರ್ತಿಗೂ ಆದಿತ್ಯಾ ಠಾಕ್ರೆ ಭಾಜನರಾಗಲಿದ್ದಾರೆ.

ಇನ್ನು ಚುನಾವಣಾ ವಿಶ್ಲೇಷಕರು ಹೇಳಿರುವಂತೆ ವೋರ್ಲಿ ಕ್ಷೇತ್ರದಲ್ಲಿ ಆದಿತ್ಯಾ ಠಾಕ್ರೆ ಗೆಲುವು ಸುಲಭದ ತುತ್ತು ಎಂದು ಹೇಳಬಹುದು. ಪ್ರಸ್ತುತ ಇಲ್ಲಿ ಶಿವಸೇನೆಯ ಸುನಿಲ್ ಶಿಂಡೆ ಶಾಸಕರಾಗಿದ್ದು, ಆದಿತ್ಯಾ ಠಾಕ್ರೆಗಾಗಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಈ ಹಿಂದೆ ಶಿವಸೇನೆ ಪ್ರಬಲ ಸ್ಪರ್ಧೆ ನೀಡಿದ್ದ ಎನ್ ಸಿಪಿ ಅಭ್ಯರ್ಥಿ ಸುನಿಲ್ ಅಹಿರ್ ಅವರೂ ಕೂಡ ಇದೀಗ ಶಿವಸೇನೆ ಸೇರಿದ್ದು, ಇದೀಗ ಶಿವಸೇನೆಗೆ ಪ್ರಬಲ ಸ್ಪರ್ಧೆ ನೀಡಬಲ್ಲ ಅಭ್ಯರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದೇ ಕಾರಣಕ್ಕೆ ಆದಿತ್ಯಾ ಠಾಕ್ರೆ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ.

1966ರಲ್ಲಿ ಬಾಳಾ ಠಾಕ್ರೆ ಅವರು ಶಿವಸೇನೆ ಸಂಘಟನೆಯನ್ನು ಸ್ಥಾಪನೆ ಮಾಡಿದಾಗಿನಂದ ಈ ವರೆಗೂ ಠಾಕ್ರೆ ಕುಟುಂಬದಿಂದ ಯಾರೂ ಕೂಡ ಚುನಾವಣಾ ರಾಜಕೀಯಕ್ಕೆ ಧುಮುಕಿರಲಿಲ್ಲ. ಚುನಾವಣೆ ಹೊರತಾಗಿಯೂ ಸರ್ಕಾರದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com