ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆಗೆ ಆದೇಶಿಸಿದ್ದ ಕರ್ನಾಟಕ ಐಎಎಸ್ ಅಧಿಕಾರಿ ಅಮಾನತ್ತು ಹಿಂಪಡೆದಿಲ್ಲ; ಇಸಿ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆಗೆ ಆದೇಶಿಸಿ ಸೇವೆಯಿಂದ ಅಮಾನತ್ತುಗೊಂಡಿರುವ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆಗೆ ಆದೇಶಿಸಿ ಸೇವೆಯಿಂದ ಅಮಾನತ್ತುಗೊಂಡಿರುವ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮದ್ ಮೊಯ್ಸಿನ್ ಅವರ ಅಮಾನತ್ತು ಆದೇಶ ಹಿಂಪಡೆದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಲ್ಲಿ  ವರದಿ ಮಾಡಿಕೊಳ್ಳಲು ಮಾತ್ರ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಅಮಾನತ್ತು ಆದೇಶವನ್ನು ಚುನಾವಣಾ ಆಯೋಗ  ಹಿಂಪಡೆದುಕೊಂಡಿದೆ ಎಂಬುದು  ತಪ್ಪು ಮಾಹಿತಿ, ಸಂಬಾಲ್ ಪುರದಲ್ಲಿದ್ದ ಅವರನ್ನು  ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯ ಕೇಂದ್ರ ಕಾರ್ಯಾಲಯಕ್ಕೆ ನಿಯೋಜಿಸಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೆಲ ಮಾಧ್ಯಮಗಳು,  ಮೊಯ್ಸಿನ್ ಅವರ ಅಮಾನತ್ತು ಆದೇಶವನ್ನು ಚುನಾವಣಾ ಆಯೋಗ ವಾಪಸ್ಸು ಪಡೆದು, ಅವರನ್ನು ತವರು ರಾಜ್ಯ ಕರ್ನಾಟಕಕ್ಕೆ ವರ್ಗಾಯಿಸಿದೆ ಎಂದು ವರದಿಮಾಡಿದ್ದವು.
1996ನೇ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮದ್ ಮೊಯ್ಸಿನ್ ಅವರನ್ನು ಶನಿವಾರ ಒಡಿಶಾದ ಸಂಬಾಲ್ ಪುರದಿಂದ  ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಕಾರ್ಯಾಲಯಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾಯಿಸಿ ವರದಿ ಮಾಡಿಕೊಳ್ಳಲು ಆದೇಶಿಸಿತ್ತು.
ಕಳೆದ ವಾರ  ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆಗೆ ಆದೇಶಿಸಿದ ನಂತರ ಮೊಯ್ಸಿನ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿತ್ತು. ಈ ಘಟನೆ ಒಡಿಶಾದ ಸಂಬಾಲ್ ಪುರದಲ್ಲಿ ನಡೆದಿತ್ತು. ಮೊಯ್ಸಿನ್  ಅವರನ್ನು ಸಾಮಾನ್ಯ ಚುನಾವಣಾ ವೀಕ್ಷಕರನ್ನಾಗಿ ಅಲ್ಲಿ ನಿಯೋಜಿಸಲಾಗಿತ್ತು.
ಎಸ್ಪಿಜಿ ರಕ್ಷಣೆ ಹೊಂದಿರುವ ಪ್ರಧಾನ ಮಂತ್ರಿಯಂತಹ ಅತಿಗಣ್ಯರು ಸಂಚರಿಸುವ ಹೆಲಿಕಾಪ್ಟರ್ ತಪಾಸಣೆಗೆ ವಿನಾಯಿತಿ ಕಲ್ಪಿಸಲಾಗಿದ್ದರೂ, ನಿಯಮ ಉಲ್ಲಂಘಿಸಿ ತಪಾಸಣೆಗೆ ಆದೇಶಿಸದ್ದಾಕ್ಕಾಗಿ ಅಮಾನತ್ತು ಮಾಡಲಾಗಿದೆ ಎಂದು ಆಯೋಗ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com