ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸ್ವಾತಂತ್ರ್ಯ ದಿನಾಚರಣೆ: ಅಭೇಧ್ಯ ಕೋಟೆಯಾದ ರಾಜಧಾನಿ ದೆಹಲಿ

ಗುರುವಾರ ನಡೆಯಲಿರುವ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ.

ನವದೆಹಲಿ: ಗುರುವಾರ ನಡೆಯಲಿರುವ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ.

ಪ್ರಮುಖವಾಗಿ ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ವಿಧಿ 370 ರದ್ದುಗೊಳಿಸಲಾಗಿದ್ದು, ಇದೇ ನೆಪದಲ್ಲಿ ಆತಂಕವಾದಿಗಳು ಅಥವಾ ಭಯೋತ್ಪಾದಕರು ದಾಳಿ ಮಾಡುವ ಸಾದ್ಯತೆ ಇದೆ. ಇದೇ ಕಾರಣಕ್ಕೆ ಕೇಂದ್ರ ಗುಪ್ತಚರ ಇಲಾಖೆ ಕೂಡ ಈಗಾಗಲೇ ಎಚ್ಚರಿಕೆ ನೀಡಿದ್ದು, ಈಗಾಗಲೇ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂತೆಯೇ ದೇಶದ ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇನ್ನು ಪ್ರಧಾನಿ ಮೋದಿ ಭಾಷಣ ಮಾಡುವ ದೆಹಲಿಯ ಕೆಂಪುಕೋಟೆ ಅಕ್ಷರಶಃ ಏಳು ಸುತ್ತಿನ ಭದ್ರಕೋಟೆಯಾಗಿ ಮಾರ್ಪಟ್ಟಿದ್ದು, ದೆಹಲಿ ಸುತ್ತಮುತ್ತ ಬರೊಬ್ಬರಿ ಸುಮಾರು 70 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.  ಪ್ರಧಾನಿ ಭಾಷಣ ವೇಳೆ ಹಿರಿಯ ಸಚಿವರು, ಉನ್ನತ ಅಧಿಕಾರಿಗಳು, ವಿದೇಶಿ ಗಣ್ಯರು ಹಾಗೂ ಸಾಮಾನ್ಯ ಜನರು ಕೂರುವ  ಮೊಘಲ್ ಯುಗದ ಕೋಟೆ ಬಳಿ ಸುಮಾರು 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಂತೆಯೇ ಭಾಷಣ ನಡೆಯುವ ಸಂದರ್ಭದಲ್ಲಿ ಕೆಂಪುಕೋಟೆ ಸುತ್ತಮುತ್ತಲ ಪ್ರದೇಶವನ್ನು ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೆ ಕೆಂಪು ಕೋಟೆ ಸುತ್ತಮುತ್ತ  ಆಕಾಶದಲ್ಲಿ ಗಾಳಿಪಟಗಳು ಕೂಡ ಹಾರಾಡದಂತೆ ದೆಹಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ದೆಹಲಿ ನಗರದ ಎಲ್ಲಿಯೂ  ಪ್ಯಾರಾ ಗ್ಲೈಡಿಂಗ್, ಬಲೂನ್ ಹಾರಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕೆಂಪು ಕೋಟೆ ಸಾಗುವ ಮಾರ್ಗದಲ್ಲಿ ಸುಮಾರು 500ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಈ ಬಾರಿ ಸ್ವಾತ್ (ವಿಶೇಷ ಕಾರ್ಯಾಚರಣೆಯ ಸೇನಾಪಡೆಗಳು) ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಂತೆಯೇ ಎನ್ಎಸ್ ಜಿ ವಿಶೇಷ ಕಮಾಂಡೋ ತಂಡವನ್ನು ನಿಯೋಜಿಸಲಾಗಿದೆ.

ಪ್ರಧಾನಿ ನರೇಂದ್ರಮೋದಿ ಅವರ ನಿವಾಸ ಹಾಗೂ ಕೆಂಪು ಕೋಟೆಯವರೆಗೂ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಿದ್ದು, ಈ ಮಾರ್ಗದಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿ ಮೆಟ್ರೋ ರೈಲು ಎಂದಿನಂತೆ ಸಂಚಾರ ನಡೆಸಲಿದೆ. ಆದಾಗ್ಯೂ, ಕೆಂಪುಕೋಟೆ, ಜಾಮಾ ಮಸೀದಿ,  ದೆಹಲಿ ಗೇಟ್ ಬಳಿ ಭದ್ರತಾ ಕಾರಣದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಂತೆಯೇ ಗುರುವಾರ ಮಧ್ಯಾಹ್ನ 2 ಗಂಟೆಯವರೆಗೂ ಮೆಟ್ರೋ ರೈಲು ನಿಲ್ದಾಣಗಳ ಬಳಿ ವಾಹನಗಳ ನಿಲುಗಡೆ ಮಾಡುವಂತಿಲ್ಲ ಎಂದು ಡಿಎಂಆರ್ ಸಿ ತಿಳಿಸಿದೆ. ಸ್ಥಳೀಯ ಪೊಲೀಸರು ಹೋಟೆಲ್ ಗಳಲ್ಲಿ ತಪಾಸಣೆ ಕೈಗೊಂಡಿದ್ದು, ಶಂಕಿತ ವಸ್ತುಗಳ ಬಗ್ಗೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. 

Related Stories

No stories found.

Advertisement

X
Kannada Prabha
www.kannadaprabha.com