ನೌಹೀರಾ ಶೇಖ್ ರ 299.99 ಕೋಟಿ ರೂ ಆಸ್ತಿ ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ

ಚಿನ್ನ ಪೋಂಜಿ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಹೀರಾ ಕಂಪೆನಿಗಳ ಸಮೂಹದ ಮುಖ್ಯಸ್ಥೆ ನೌಹೀರಾ ಶೇಕ್ ಗೆ ಸೇರಿದ 299.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅನೇಕ ರಾಜ್ಯಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೀರಾ ಗೋಲ್ಡ್ ಪೋಂಜಿ ವಂಚನೆ ಪ್ರಕರಣ: ತೆಲಂಗಾಣ, ಕೇರಳ, ಮಹಾರಾಷ್ಟ್ರ, ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಆಸ್ತಿ ವಶ

ನವದೆಹಲಿ: ಚಿನ್ನ ಪೋಂಜಿ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಹೀರಾ ಕಂಪೆನಿಗಳ ಸಮೂಹದ ಮುಖ್ಯಸ್ಥೆ ನೌಹೀರಾ ಶೇಕ್ ಗೆ ಸೇರಿದ 299.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅನೇಕ ರಾಜ್ಯಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.

ತೆಲಂಗಾಣ, ಕೇರಳ, ಮಹಾರಾಷ್ಟ್ರ, ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೃಷಿ ಜಮೀನು, ವಾಣಿಜ್ಯ ಪ್ಲಾಟ್‌ಗಳು, ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳ ರೂಪದಲ್ಲಿನ 277.29 ಕೋಟಿ ರೂ. ಮೌಲ್ಯದ 96 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬ್ಯಾಂಕ್‍ ಖಾತೆಗಳಲ್ಲಿ 22.69 ಕೋಟಿ ರೂ. ಇದೆ. ಹೆಚ್ಚಿನ ಲಾಭದ ಸೋಗಿನಲ್ಲಿ ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಂದ ಅಕ್ರಮವಾಗಿ ಠೇವಣಿ ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಕೇಂದ್ರ ಹಣಕಾಸು ತನಿಖಾ ಸಂಸ್ಥೆಯಾದ ಇಡಿ ಈ ಕ್ರಮ ಕೈಗೊಂಡಿದೆ. ಹೀರಾ ಗ್ರೂಪ್ ಆಫ್ ಕಂಪನೀಸ್‍ ವಿರುದ್ಧ ದೇಶಾದ್ಯಂತ ಅನೇಕ ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ.

ನೌಹೀರಾ ಶೇಖ್‍ ಅವರು ಹೀರಾ ಗ್ರೂಪ್ ಆಫ್ ಕಂಪೆನೀಸ್‍ ಗೆ ಅನೇಕ ಕಂಪನಿಗಳನ್ನು ಸೇರಿಸಿಕೊಂಡಿದ್ದರು. ದೇಶಾದ್ಯಂತದ ಸುಮಾರು 1.72,000 ಹೂಡಿಕೆದಾರರಿಂದ ಅನಧಿಕೃತ ಠೇವಣಿಗಳಾಗಿ ಸುಮಾರು 5,600 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕಾರ್ಯನಿರ್ವಾಹಕರು ಮತ್ತು ನೇರ ಮಾರಾಟದ ಏಜೆಂಟರು ವರ್ಷಕ್ಕೆ ಶೇ.36 ಬಡ್ಡಿದರವನ್ನು ಪಾವತಿಸುವ ಸುಳ್ಳು ಭರವಸೆಯೊಂದಿಗೆ ಠೇವಣಿ ಇರಿಸಿಕೊಳ್ಳಲಾಗಿತ್ತು.

'ನೌಹೀರಾ ಅವರು ಹೂಡಿಕೆಗೆ ಜನರನ್ನು ಸೆಳೆಯಲು ಆಮಿಷವೊಡ್ಡುವ ಯೋಜನೆಗಳನ್ನು ತರುತ್ತಿದ್ದರು. ಇವನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಈ ಉದ್ದೇಶಕ್ಕಾಗಿ ನೌಹೀರಾ ಹೀರಾ ಗ್ರೂಪ್ ಅಡಿಯಲ್ಲಿ 24 ಸಂಸ್ಥೆಗಳು ಇಲ್ಲವೇ ಕಂಪೆನಿಗಳನ್ನು ಪ್ರಾರಂಭಿಸಿದರು. ಈ ಕಂಪೆನಿಗಳ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ಬ್ಯಾಂಕುಗಳಲ್ಲಿ 182 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು.' ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನುಬದ್ಧವಾಗಿ ಲಾಭ ಗಳಿಸುತ್ತಿದ್ದೇನೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಲು ಮಾತ್ರ ಚಿನ್ನ, ಆಹಾರ ಮತ್ತು ಜವಳಿ ವ್ಯಾಪಾರ ವ್ಯವಹಾರಗಳನ್ನು ನೌಹೀರಾ ಆರಂಭಿಸಿದ್ದರು. ಚಿನ್ನ, ಜವಳಿ ಮತ್ತು ಆಹಾರ ಮಾರ್ಟ್‌ಗಳಲ್ಲಿನ ವ್ಯವಹಾರದ ಪ್ರಮಾಣ ಕಡಿಮೆಯಾಗಿದ್ದು, ಆಕೆ ಭರವಸೆ ನೀಡಿದ ಹೆಚ್ಚಿನ ಆದಾಯವನ್ನು ಸಮರ್ಥಿಸಲು ಸಾಕಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನೌಹೀರಾ ಶೇಖ್‍ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಆಪ್ತ ಸಹಚರರು ಠೇವಣಿದಾರರ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ತಿರುಗಿಸಿಕೊಂಡಿದ್ದರು. ವೈಯಕ್ತಿಕ ಲಾಭಕ್ಕಾಗಿ ಭಾರಿ ಪ್ರಮಾಣದ ಸ್ತಿರಾಸ್ತಿ ಮತ್ತು ಚರಾಸ್ತಿ ಮಾಡಿದ್ದರು.' ಎಂದು ತನಿಖೆಯಿಂದ ತಿಳಿದುಬಂದಿದೆತಮ್ಮ ಖಾತೆಗಳಿಗೆ ತಿರುಗಿಸಿಕೊಂಡ ಹೂಡಿಕೆದಾರರ ಹಣವನ್ನು ಮತ್ತಷ್ಟು ಶೆಲ್ ಕಂಪನಿಗಳಲ್ಲಿ ಮತ್ತು ಬೆನಾಮಿ ಸ್ವತ್ತುಗಳ ರೂಪದಲ್ಲಿ ಹೂಡಲಾಯಿತು. ಇದರಿಂದಾಗಿ ಅಂತಿಮವಾಗಿ ಲಕ್ಷಾಂತರ ಮುಗ್ಧ ಜನರು ಮೋಸ ಹೋದರು ಎಂದು ಪ್ರಕಟಣೆ ತಿಳಿಸಿದೆ.

ನೌಹೀರಾ ಶೇಖ್‍ ಕರ್ನಾಟಕದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಆರಂಭಿಸಿದ್ದ ಎಂಇಪಿ ಪಕ್ಷದಿಂದ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಅಲ್ಲದೆ, ಕನ್ನಡ ಸುದ್ದಿವಾಹಿನಿಯೊಂದನ್ನೂ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com