ತಮಿಳುನಾಡು: ದಲಿತ ವ್ಯಕ್ತಿಯ ಶವ ಹಗ್ಗದ ಮೂಲಕ ಸೇತುವೆಯಿಂದ ಕೆಳಗಿಳಿಸಿದ ಸಂಬಂಧಿಕರು, ಕಾರಣ ಏನು ಗೊತ್ತಾ?

ಅಪಘಾತದಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೊಬ್ಬರ ಶವವನ್ನು ಸೇತುವೆಯ ಮೇಲಿನಿಂದ ಕೆಳಕ್ಕೆ ಇಳಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಲಿತ ವ್ಯಕ್ತಿ ಶವ
ದಲಿತ ವ್ಯಕ್ತಿ ಶವ

ವೆಲ್ಲೂರ್: ಅಪಘಾತದಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೊಬ್ಬರ ಶವವನ್ನು ಸೇತುವೆಯ ಮೇಲಿನಿಂದ ಕೆಳಕ್ಕೆ ಇಳಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ವೆಲ್ಲೂರ್ ಜಿಲ್ಲೆಯ ವಾಣಿಯಂಬಾಡಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿಈ ಆಘಾತಕಾರಿ ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ದಲಿತ ಎಂಬ ಕಾರಣಕ್ಕಾಗಿ ಈ ಗ್ರಾಮದ ಸವರ್ಣೀಯರು ಆತನ ಶವವನ್ನು ತಮ್ಮ ಹೊಲಗಳ ಮೂಲಕ ಹಾದು ಸ್ಮಶಾನಕ್ಕೆ ಕೊಂಡೊಯ್ಯಲು ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ, ಎತ್ತರದ ಸೇತುವೆ ಮೇಲಿಂದ ಶವವನ್ನು ಕೆಳಗಿಳಿಸಿ ಕಷ್ಟಪಟ್ಟು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ದಲಿತರ ಈ ಸಾಹಸವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ವೈರಲ್​ ಆಗಿದೆ.

ಕಳೆದ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಾಣಿಯಂಬಾಡಿ ನಿವಾಸಿ ಕುಪ್ಪನ್​ (50) ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಶನಿವಾರ ಶವವನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಿದ್ದರು. ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ಅದರಂತೆ ಶವವನ್ನು ವಾಣಿಯಂಬಾಡಿಯ ಪಾಲಾರ್​ ನದಿ ತಟದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿತ್ತು.

ರುದ್ರಭೂಮಿಗೆ ಸಾಗುವ ಹಾದಿಯ ಅಕ್ಕಪಕ್ಕ ಜಮೀನುಗಳನ್ನು ಮೇಲ್ಚಾತಿಯವರು ಖರೀದಿಸಿದ್ದರಿಂದ ಆ ಹಾದಿಯಲ್ಲಿ ದಲಿತರ ಶವ ಸಾಗಿಸಲು ಅನುಮತಿ ನೀಡಿಲ್ಲ. ಇದರಿಂದ ದಲಿತರು ಅನಿವಾರ್ಯವಾಗಿ ಶವವನ್ನು ಸೇತುವೆ ಮೇಲಿಂದ ಕೆಳಕ್ಕಿಳಿಸಿ ಸ್ಮಶಾನಕ್ಕೆ ಒಯ್ಯುತ್ತಾರೆ.

ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com