ನಿರಾಧಾರ, ಸುಳ್ಳುಸುದ್ದಿ; ಗೃಹ ಸಚಿವಾಲಯ ಭೇಟಿ ಕುರಿತ ಸುದ್ದಿ ಕುರಿತು ಒಮರ್ ಕಿಡಿ

ಮಾಜಿ ಸಿಎಂಗಳಾದ ಓಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಕೇಂದ್ರ ಗೃಹ ಸಚಿವಾಲಯ ಸಂಪರ್ಕಿಸಿದೆ ಎಂಬ ವರದಿಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ತಳ್ಳಿ ಹಾಕಿದ್ದು, ವರದಿ ನಿರಾಧಾರ, ಸುಳ್ಳುಸುದ್ದಿ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗೃಹ ಬಂಧನದಿಂದ ಮುಕ್ತರಾಗಲು ಗೃಹ ಸಚಿವಾಲಯದಿಂದ ಷರತ್ತು, ಭದ್ರತೆ ಕುರಿತು ಚರ್ಚೆ ಎಂದಿದ್ದ ವರದಿ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಂಟಾಗಿರುವ ತೀವ್ರ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಸಹಕಾರ ಕೋರಿ ಗೃಹಬಂಧನದಲ್ಲಿರುವ ಮಾಜಿ ಸಿಎಂಗಳಾದ ಓಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಕೇಂದ್ರ ಗೃಹ ಸಚಿವಾಲಯ ಸಂಪರ್ಕಿಸಿದೆ ಎಂಬ ವರದಿಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ತಳ್ಳಿ ಹಾಕಿದ್ದು, ವರದಿ ನಿರಾಧಾರ, ಸುಳ್ಳುಸುದ್ದಿ ಎಂದು ಹೇಳಿದ್ದಾರೆ.

ವಿಧಿ 370 ರದ್ದುಗೊಳಿಸಿದ ನಂತರದಲ್ಲಿ ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಕಾಶ್ಮೀರ ಮಾಜಿ ಸಿಎಂಗಳ ಸಲಹೆ ಕೇಳಿದೆ ಎಂದು ವರದಿ ಮಾಡಲಾಗಿತ್ತು. ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಕೇಂದ್ರ ಗೃಹ ಸಚಿವಾಲಯದ ಪರವಾಗಿ ಓಮರ್​ ಮತ್ತು ಮೆಹಬೂಬಾ ಅವರನ್ನು ಬೇಹುಗಾರಿಕಾ ಪಡೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಬಿಡುಗಡೆ ಬಳಿಕ ರಾಜಕೀಯ ಸಭೆಗಳನ್ನು ನಡೆಸುವುದಿಲ್ಲ. ಕಾಶ್ಮೀರದಲ್ಲಿನ ಹೊಸ ರಾಜಕೀಯ ಬೆಳವಣಿಗೆ ಕುರಿತು ಏನೊಂದು ಪ್ರತಿಕ್ರಿಯಿಸುವುದಿಲ್ಲ ಎಂಬ ಷರತ್ತುಗಳಿಗೆ ಒಪ್ಪಿಕೊಂಡರೆ ತಮ್ಮನ್ನು ಗೃಹ ಬಂಧನ ಮುಕ್ತಗೊಳಿಸುವುದಾಗಿ ಸರ್ಕಾರ ಹೇಳಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. 

ಇದೀಗ ಈ ವರದಿಯನ್ನು ಒಮರ್ ಅಬ್ದುಲ್ಲಾ ತಳ್ಳಿ ಹಾಕಿದ್ದು, 'ಈ ವರದಿಗಳು ನಿರಾಧವಾದ, ಸುಳ್ಳು ಸುದ್ದಿ'ಗಳು ಎಂದು ಹೇಳಿದ್ದಾರೆ. ಆದರೆ ಇದೇ ವಿಚಾರವಾಗಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮೂಲಗಳು ಮಾತ್ರ ಕೆಲ ಸರ್ಕಾರಿ ಅಧಿಕಾರಿಗಳು ಗೃಹಬಂಧನದಲ್ಲಿರುವ ಉಭಯ ನಾಯಕರನ್ನು ಭೇಟಿಯಾಗಿದ್ದರು. ಅಲ್ಲದೆ ಮಾತುಕತೆ ನಡೆಸಿದ್ದರು ಎಂದು ಹೇಳಿವೆ. ಅಂತೆಯೇ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಸಹಕರಿಸುವಂತೆ ಅದಿಕಾರಿಗಳು ಅವರಿಬ್ಬರ ಬಳಿ ಮನವಿ ಮಾಡಿಕೊಂಡರು. ಆದರೆ 370 ವಿಧಿ ರದ್ದುಗೊಳಿಸುವ ಸಂಸತ್​ ನ ನಿರ್ಧಾರವನ್ನು ವಿರೋಧಿಸುವ ವಿಷಯವಾಗಿ ತಮ್ಮ ನಿಲುವನ್ನು ಬದಲಿಸಕೊಳ್ಳುವುದಿಲ್ಲ ಎಂದು ಉಭಯ ನಾಯಕರು ಸ್ಪಷ್ಟಪಡಿಸಿದರು ಎಂದು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com