ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಕೊನೆಗೂ ನಾಸಾ ಪತ್ತೆ ಹಚ್ಚಿದ್ದು, ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ಹಂಚಿಕೊಂಡಿದೆ. 

Published: 03rd December 2019 08:14 AM  |   Last Updated: 03rd December 2019 08:21 AM   |  A+A-


NASA finds Vikram Lander, tweets images of impact site on moon surface

ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

Posted By : Manjula VN
Source : The New Indian Express

ನವದೆಹಲಿ: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಕೊನೆಗೂ ನಾಸಾ ಪತ್ತೆ ಹಚ್ಚಿದ್ದು, ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ಹಂಚಿಕೊಂಡಿದೆ. 

ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್ (ಎಲ್ಆರ್ಒ) ಮೂಲಕ ತೆಗೆದ ಚಿತ್ರವೊಂದನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳ ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರಗಳು ಪತ್ತೆಯಾಗಿರುವುದು ಕಂಡು ಬಂದಿದೆ. 

ಅಲ್ಲದೆ, ಲ್ಯಾಂಡರ್'ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಲವು ಸ್ಥಳಗಳಲ್ಲಿ ಹರಡಿಕೊಂಡಿರುವುದು ತಿಳಿದುಬಂದಿದೆ. 

ಸೆ.26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡಿದ್ದ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಶಣ್ಮುಗ ಸುಬ್ರಮಣ್ಯಂ ಎಂಬ ವ್ಯಕ್ತಿ ಎಲ್ಆರ್'ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಕಿಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್'ನ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿತ್ತು. 

3.84 ಲಕ್ಷ ಕಿಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಸ್ಥಳ ತಲುಪದೇ ಪಥದಲ್ಲಿಯೇ ಸಾಗುತ್ತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಭಾರೀ ಹರ್ಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗನ ಜಾವ 1.50ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿಮೀ ಎತ್ತರದಲ್ಲಿದ್ದಾಗ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಇದು ಇಡೀ ವಿಶ್ವವೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2 ಕನಸು ಭಗ್ನಗೊಳ್ಳುವಂತಾಗಿತ್ತು. ಈ ಮೂಲಕ ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲಗೊಂಡಿತ್ತು. 

ಪ್ರಧಾನಿ ಮೋದಿ ಕೂಡ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಕುಳಿತು ಚಂದ್ರಯಾನ-2 ಯೋಜನೆಯನ್ನು ವೀಕ್ಷಣೆ ಮಾಡುತ್ತಿದ್ದರು. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಅವರು 2.17ಸುಮಾರಿಗೆ ಪ್ರಕಟಿಸಿದ್ದರು. 

ವಿಕ್ರಮ್ ಲ್ಯಾಂಡರ್ ಸೆ.7 ಮುಂಜಾನೆ 1.38ಕ್ಕೆ ಲ್ಯಾಂಡರ್ ಗಗನನೌಕೆಯಿಂದ ಕಳಚಿಕೊಂಡಿತ್ತು. ಚಂದ್ರನ ದಕ್ಷಿಣ ಭಾಗದ ಮೇಲ್ಮೈ ಸನಿಹಕ್ಕೆ ಬಂದಿತ್ತು. ಕೊನೆಯ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡು ಅಪ್ಪಳಿಸಿರಬಹುದು ಎಂದು ಅಂದಾಜಿಸಲಾಗಿತ್ತು. ನಾಸಾ ಈಗ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಪತ್ತೆ ಹಚ್ಚಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp