ಬಹು ಚರ್ಚಿತ ಮಹತ್ವದ ಪೌರತ್ವ ಮಸೂದೆ ಇಂದು ಮಂಡನೆ

ನೆರೆ ದೇಶಗಳಲ್ಲಿನ ಧಾರ್ಮಿಕ ಕಿರುಕುಳಗಳಿಗೆ ಹೆದರಿ, ಅಲ್ಲಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತಕರರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. 
ಸಂಗ್ರಹ ಚಿತ್ರd
ಸಂಗ್ರಹ ಚಿತ್ರd

ನವದೆಹಲಿ: ನೆರೆ ದೇಶಗಳಲ್ಲಿನ ಧಾರ್ಮಿಕ ಕಿರುಕುಳಗಳಿಗೆ ಹೆದರಿ, ಅಲ್ಲಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತಕರರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. 

60 ವರ್ಷದಷ್ಟು ಹಳೆಯದಾದ ಈ ಮಸೂದೆಯ ತಿದ್ದುಪಡಿಗೆ ಸೋಮವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಮಸೂದೆ ಮಂಡಿಸಲಿದ್ದಾರೆ. ನಂತರ ಇದನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಲೋಕಸಭಾ ಕಲಾಪದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿನ ಧಾರ್ಮಿಕ ಕಿರುಕುಳಗಳಿಗೆ ಹೆದರಿ, ಅಲ್ಲಿಂದ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ಕೊಡುವುದೇ ಈ ಮಸೂದೆಯ ಉದ್ದೇಶವಾಗಿದೆ. ಆದರೆ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಈಗಾಗಲೇ ಈ ವಿಧೇಯಕಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 

ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರನ್ನು ಆ ದೇಶಕ್ಕೆ ಹಿಮ್ಮೆಟ್ಟಿಸುವ ಅಸ್ಸಾಂ ಒಪ್ಪಂದ-1985ಗೆ ಇದರಿಂದ ಹಿನ್ನಡೆಯಾಗಲಿದೆ ಎಂಬುದು ಈಶಾನ್ಯ ಭಾರತದ ಬಹುತೇಕ ವಲಯಗಳ ಅಭಿಪ್ರಾಯ. ಹೀಗಾಗಿ ವಿಧೇಯಕ ವಿರೋಧಿಸಿ ಈಗಾಗಲೇ ಈಶಾನ್ಯ ವಿದ್ಯಾರ್ಥಗಳ ಒಕ್ಕೂಟ ಡಿಸೆಂಬರ್ 10ರಂದು 11ತಾಸಿನ ಬಂದ್'ಗೆ ಕರೆ ನೀಡಿದೆ. ಈ ವಿಧೇಯಕ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿತ್ತು. ಈ ಹಿಂದಿನ ಅವಧಿಯಲ್ಲಿ ಮೋದಿ ಸರ್ಕಾರ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. 

ಆದರೆ, ಈಶಾನ್ಯದಲ್ಲಿ ಉಂಟಾಗಿದ್ದ ತೀವ್ರ ವಿರೋಧದ ಕಾರಣ ರಾಜ್ಯಸಭೆಯಲ್ಲಿ ಅದನ್ನು ಮಂಡಿಸಿರಲಿಲ್ಲ. ಮುಂದಿನ 4 ದಿನಗಳಲ್ಲಿ ಸಂಸತ್ ನಲ್ಲಿ ಮಹತ್ವದ ಮಸೂದೆಗಳನ್ನು ಮಂಡನೆಯಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳು ವಿಪ್ ಜಾರಿ ಮಾಡಿವೆ.

ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವ ಕಾರಣ ಮಸೂದೆಯನ್ನು ಸುಲಭವಾಗಿ ಅಂಗೀಕರಿಸುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಮತ್ತೊಂದೆಡೆ ರಾಜ್ಯ ಸಭೆಯಲ್ಲಿ ಬಹುಮತ ಇಲ್ಲದಿದ್ದರೂ, ಹಲವಾರು ಮಸೂದೆಗಳನ್ನು ವಿರೋಧ ಪಕ್ಷಗಳ ಬೆಂಬಲದ ಮೂಲಕವೇ ಅಂಗೀಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸರ್ಕಾರ, ಈ ಬಾರಿಯೂ ಅದೇ ವಿಶ್ವಾಸದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com