'ರೇಪ್ ಇನ್ ಇಂಡಿಯಾ' ಹೇಳಿಕೆ: ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ರಾಹುಲ್ ಗಾಂಧಿ

ರೇಪ್ ಇನ್ ಇಂಡಿಯಾ ಕುರಿತ ತಮ್ಮ ಹೇಳಿಕೆ ಕುರಿತಂತೆ ತಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರೇಪ್ ಇನ್ ಇಂಡಿಯಾ ಕುರಿತ ತಮ್ಮ ಹೇಳಿಕೆ ಕುರಿತಂತೆ ತಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಕೋಲಾಹಲ ಉಂಟಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ದೆಹಲಿಯನ್ನು ಅತ್ಯಾಚಾರದ ರಾಜಧಾನಿ ಎಂದು ಹೇಳಿದ್ದ ದಾಖಲೆ ನನ್ನ ಮೊಬೈಲ್ ನಲ್ಲಿದೆ. ಶೀಘ್ರದಲ್ಲೇ ಅದನ್ನು ಟ್ವೀಟ್ ಮಾಡಿ ಜನರಿಗೆ ತಿಳಿಸುತ್ತೇನೆ. ಅವರ ಹೇಳಿಕೆಯನ್ನು ನಾನು ಹೇಳಿದ್ದೇನೆಯಷ್ಟೇ.. ಹೀಗಾಗಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಅಂತೆಯೇ ಬಿಜೆಪಿ ಸಂಸದರ ಪ್ರತಿಭಟನೆ ಕುರಿತು ಮಾತನಾಡಿದ ರಾಹುಲ್ ಗಾಂಧಿ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. ಈ ವಿಚಾರವನ್ನು ದೇಶದ ಜನರಿಂದ ಮರೆಮಾಚಲು ಬಿಜೆಪಿ ನಾಯಕರು ಇಂತಹ ಕ್ಷುಲ್ಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ. ಅವರ ಈ ನಾಟಕವನ್ನು ಜನ ಅರಿತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅನಿರ್ಧಿಷ್ಟಾವಧಿಗೆ ಲೋಕಸಭೆ ಸದನ ಮುಂದೂಡಿಕೆ
ಚಳಿಗಾಲದ ಸಂಸತ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಲೋಕಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಯಿತು. ಸದನವನ್ನು ಮುಂದೂಡುವ ಮೊದಲು, ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ, ಇತರ ಎಲ್ಲ ಪಕ್ಷಗಳ ಮುಖಂಡರು ಮತ್ತು ಸದಸ್ಯರಿಗೆ ಸದನದ ವ್ಯವಹಾರವನ್ನು ನಡೆಸುವಲ್ಲಿ ಸಹಕರಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ೧೮ ರಿಂದ ಪ್ರಾರಂಭವಾಗಿತ್ತು.

ಅಧಿವೇಶನದಲ್ಲಿ ಲೋಕಸಭೆಯ ಉತ್ಪಾದಕತೆ ಶೇಕಡಾ ೧೧೫ ರಷ್ಟಿದ್ದು, ೨೦ ಸಭೆಗಳಲ್ಲಿ ೯೩೪ ವಿಷಯಗಳ ಪ್ರಸ್ತಾಪವಾಗಿದೆ ಎಂದು ಓಂ ಬಿರ್ಲಾ ಹೇಳಿದರು. ಇದಕ್ಕೂ ಮುನ್ನ, ಬೆಳಗ್ಗೆ ಕಲಾಪ ಆರಂಭವಾದ ನಂತರ ರಾಹುಲ್ ಗಾಂಧಿಯವರ ’ರೇಪ್ ಇನ್ ಇಂಡಿಯಾ’ ಹೇಳಿಕೆ ವಿರೋಧಿಸಿ ನಡೆದ ಗದ್ದಲದಿಂದ ಎರಡು ಬಾರಿ ಕಲಾಪ ಮುಂದೂಡಿಕೆಯಾಗಿತ್ತು.  ಲಾಕೆಟ್ ಚಟರ್ಜಿ ಮತ್ತು ರಾಮ ದೇವಿ ಸೇರಿದಂತೆ ಬಿಜೆಪಿ ಮಹಿಳಾ ಸದಸ್ಯರು ರಾಹುಲ್ ಹೇಳಿಕೆಯ ವಿಚಾರವನ್ನು ಪ್ರಸ್ತಾಪಿಸಿದರು.

"ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಯಕನೊಬ್ಬ ಭಾರತೀಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಬೇಕೆಂದು ಸ್ಪಷ್ಟ ಕರೆ ನೀಡುತ್ತಿದ್ದಾನೆ. ಇದು ದೇಶದ ಜನರಿಗೆ ರಾಹುಲ್ ಗಾಂಧಿಯವರ ಸಂದೇಶವೇ?" ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರು ಮಹಿಳೆಯರನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಅಪಹಾಸ್ಯ ಮಾಡುವ ಸಾಧನವಾಗಿ ಬಳಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ’ಮೇಕ್ ಇನ್ ಇಂಡಿಯಾ’ ಘೋಷಣೆಯನ್ನು ಎಲ್ಲರೂ ಗೌರವಿಸುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಏನು ನಡೆಯುತ್ತಿದೆ ಎಂಬುದು ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಡಿಎಂಕೆ ಸದಸ್ಯೆ ಎಂ ಕೆ ಕನಿಮೋಳಿ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡರು.  

"ಮಹಿಳೆಯರ ಮೇಲಿನ ಅಪರಾಧದ ವಿಷಯಗಳಲ್ಲೂ ಸಹ, ನೀವು ಪಕ್ಷದ ರೇಖೆಗಳಿಗಿಂತ ಮೇಲೇರಲು ಸಾಧ್ಯವಿಲ್ಲ ಎಂದು ತೀವ್ರವಾಗಿ ನಿರಾಶೆಗೊಂಡಿದ್ದೇನೆ. ನನಗೆ ಅಸಹ್ಯವಾಗಿದೆ" ಎಂದು ಸ್ಮೃತಿ ಇರಾನಿ ಟೀಕಿಸಿದರು. ರಾಹುಲ್ ಗಾಂಧಿ ಅಷ್ಟು ಅಜ್ಞಾನಿಯಾಗಲು ಸಾಧ್ಯವಿಲ್ಲ ... ನನಗೆ ಆಘಾತವಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರೊಬ್ಬರು ಭಾರತದಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡಲು ಆಹ್ವಾನಿಸುತ್ತಿದ್ದಾರೆ, ” ಎಂದು ಅವರು ಹೇಳಿದರು. ಸದನ ಮತ್ತೆ ಸಭೆ ಸೇರಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ರಾಹುಲ್ ಗಾಂಧಿಯವರ ಟೀಕೆಗಳನ್ನು ಖಂಡಿಸಿದರು ಮತ್ತು "ಅಂತಹ ಟೀಕೆಗಳಿಂದ ನನಗೆ ನೋವುಂಟಾಗಿದೆ; ಸದನಕ್ಕೆ ನೋವುಂಟಾಗಿದೆ ಮತ್ತು ದೇಶಕ್ಕೂ ನೋವುಂಟಾಗಿದೆ. ಇಂತಹ ನಾಯಕರಿಗೆ ಲೋಕಸಭೆಯಲ್ಲಿ ಉಳಿಯುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿಯವರ ಹೇಳಿಕೆ ಶುಕ್ರವಾರ ರಾಜ್ಯಸಭೆಯ ಗದ್ದಲಕ್ಕೂ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com