ಕಾರ್ಗಿಲ್ ಹೀರೋಗೆ ಅಂತಿಮ ಸಲಾಂ; ಇತಿಹಾಸದ ಪುಟ ಸೇರಿದ ಮಿಗ್–27

ದಶಕಗಳ ಕಾಲ ಕಾರ್ಯ ನಿರ್ವಹಿಸಿ ಭಾರತೀಯ ವಾಯುಸೇನೆಯ ಬಲ ಇಮ್ಮಡಿಗೊಳಿಸಿದ್ದ ಭಾರತದ ಹೆಮ್ಮೆಯ ಮಿಗ್ 27 ಯುದ್ಧ ವಿಮಾನಗಳಿಗೆ ಇಂದು ಅಧಿಕೃತವಾಗಿ ಸೇನೆಯಿಂದ ಬೀಳ್ಗೊಡುಗೆ ನೀಡಲಾಗುತ್ತಿದೆ.
ಮಿಗ್ 27 ಯುದ್ದ ವಿಮಾನ
ಮಿಗ್ 27 ಯುದ್ದ ವಿಮಾನ

ನವದೆಹಲಿ: ದಶಕಗಳ ಕಾಲ ಕಾರ್ಯ ನಿರ್ವಹಿಸಿ ಭಾರತೀಯ ವಾಯುಸೇನೆಯ ಬಲ ಇಮ್ಮಡಿಗೊಳಿಸಿದ್ದ ಭಾರತದ ಹೆಮ್ಮೆಯ ಮಿಗ್ 27 ಯುದ್ಧ ವಿಮಾನಗಳಿಗೆ ಇಂದು ಅಧಿಕೃತವಾಗಿ ಸೇನೆಯಿಂದ ಬೀಳ್ಗೊಡುಗೆ ನೀಡಲಾಗುತ್ತಿದೆ.

ಹೌದು.. 1999ರ ಕಾರ್ಗಿಲ್‌ ಯುದ್ಧದ ಹೀರೋ ಮಿಗ್–27 ಯುದ್ಧ ವಿಮಾನಗಳ ಸೇವೆ ಇಂದಿನಿಂದ ಅಧಿಕೃತವಾಗಿ ಕೊನೆಯಾಗಲಿದ್ದು, ಜೋಧ್ ಪುರದ ವಾಯುನೆಲೆಯಲ್ಲಿ ಈ ವಿಮಾನಗಳಿಗೆ ನೆಲೆ ಕಲ್ಪಿಸಲಾಗಿದೆ. ವಾಯುಪಡೆ ಬಳಿ ಕೇವಲ ಏಳು ರಷ್ಯಾ ನಿರ್ಮಿತ ಮಿಗ್‌ 27 ಮಾತ್ರ (ಲಾಸ್ಟ್‌ ಸ್ಕ್ಯಾ‌ಡ್ರನ್‌) ಉಳಿದಿದ್ದು, ಇದಕ್ಕೆ ಸ್ಕಾರ್ಪಿಯನ್‌ 29 ಎಂಬ ಹೆಸರಿದೆ. ಅವುಗಳನ್ನು ರಾಜಸ್ಥಾನದ ಜೋಧ್‌ಪುರ ವಾಯುನೆಲೆಯಲ್ಲಿ(ನೈರುತ್ಯ ವಾಯುಪಡೆ) ಇರಿಸಲಾಗಿದೆ.  ಡಿ. 27ರಂದು ಅಂದರೆ ಇಂದು ಕೊನೆಯ ಬಾರಿಗೆ ಈ ಏಳು ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಲಿವೆ. ನಂತರ ಅವುಗಳನ್ನು ನಿಷ್ಕ್ರೀಯಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲಿಗೆ ಇನ್ನೆರಡು ದಿನಗಳಲ್ಲಿ ದೇಶಾದ್ಯಂತ ಮಿಗ್‌-27 ಹಾರಾಟ ಬಂದ್‌ ಆಗಲಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ಸೊಂಬಿತ್‌ ಘೋಷ್‌ ಅವರು ಹೇಳಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಈ ಮಿಗ್ 27 ಯುದ್ಧ ವಿಮಾನಕ್ಕಿದೆ. 80ರ ದಶಕದಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಈ ಯುದ್ಧ ವಿಮಾನಗಳು ಕಾರ್ಗಿಲ್ ಯುದ್ಧದ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಅದೇ ಕಾರ್ಯಾಚರಣೆ ಮೂಲಕವೇ ಈ ಯುದ್ಧ ವಿಮಾನಗಳು ‘ಬಹದ್ದೂರ್‌’ ಎಂಬ ಅಡ್ಡಹೆಸರಿನಿಂದ ಪ್ರಸಿದ್ಧಿ ಪಡೆದಿದ್ದವು. ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನದ ವಶಕ್ಕೆ ಸಿಲುಕಿ ಬಳಿಕ ಬಿಡುಗಡೆಯಾಗಿ ಬಂದಿದ್ದ ಫ್ಲೈಟ್ ಲೆಫ್ಟಿನೆಂಟ್ ಕಂಭಂಪಾಟಿ ನಚಿಕೇತ್ ಸಹ ಮಿಗ್–27 ಯುದ್ಧವಿಮಾನ ಮುನ್ನಡೆಸಿದ್ದರು. ಮಿಗ್–27 ಪತನಗೊಂಡಿದ್ದರಿಂದಲೇ ಅವರು ಪಾಕ್ ವಶವಾಗಿದ್ದರು.

ಕಳೆದ ವರ್ಷ ಜೋಧ್‌ಪುರ ವಾಯುನೆಲೆಯಲ್ಲಿಇದ್ದ ಎರಡು ಮಿಗ್‌27 ಸ್ಕ್ಯಾ‌ಡ್ರನ್ ಗಳ ಪೈಕಿ ಒಂದನ್ನು ನಿಷ್ಕ್ರೀಯಗೊಳಿಸಲಾಗಿತ್ತು. 1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌ ಸರಣಿಯ ಯುದ್ಧವಿಮಾನಗಳ ಸೇರ್ಪಡೆಯಾಗಿತ್ತು. ಸೋವಿಯತ್‌ ಒಕ್ಕೂಟದ ಮಿಕೊಯಾನ್ ಗೌರೆವಿಚ್ ಮಿಗ್ ವಿಮಾನಗಳ ನಿರ್ಮಾತೃ ಸಂಸ್ಥೆಯಾಗಿದೆ. ಮಿಗ್-21, ಮಿಗ್-23ಎಂಎಫ್, ಮಿಗ್-23ಬಿನ್, ಮಿಗ್-25, ಮಿಗ್-27 ಮಿಗ್ ಸರಣಿ ವಿಮಾನಗಳಾಗಿವೆ. 

ಸದ್ಯ ವಿಶ್ವದ ಯಾವುದೇ ದೇಶದಲ್ಲಿ ಮಿಗ್‌-27 ಯುದ್ಧ ವಿಮಾನ ಬಳಕೆಯಲ್ಲಿಲ್ಲ. ಹಾಗಾಗಿ ಈ ಯುದ್ಧ ವಿಮಾನ ಚರಿತ್ರೆಯ ಪುಟಗಳನ್ನು ಸೇರಲಿದೆ. ಇಂದು ತನ್ನ ಕೊನೆಯ ಹಾರಾಟದ ಮೂಲಕ ಮಿಗ್ 27 ಯುದ್ಧ ವಿಮಾನದ ಯುಗಾಂತ್ಯವಾದಂತಾಗಿದೆ. ಜೋಧ್ ಪುರದ ವಾಯು ಪಡೆ ನೆಲೆಯಲ್ಲಿ ಮಿಗ್ 27 ಯುದ್ಧ ವಿಮಾನ ಕೊನೆ ಹಾರಾಟ ನಡೆಸಿದ್ದು, ಮಿಗ್ 27 ಸೇವಾ ನಿಲುಗಡೆ ಸಮಾರಂಭದಲ್ಲಿ ವಾಯುಪಡೆಯ ಹಿರಿಯ ಯೋಧರು, ಏರ್ ಮಾರ್ಷಲ್ ಎಸ್ ಕೆ ಘೋಟಿಯಾ, ವಾಯುಪಡೆ ಅಧಿಕಾರಿಗಳು ಭಾಗವಹಿಸಿದ್ದಾರೆ. 

ಈಗಾಗಲೇ ಭಾರತೀಯ ವಾಯುಪಡೆಯ ಮಿಗ್ 23ಬಿಎನ್, ಮಿಗ್ 23ಎಂಎಫ್ ಹಾಗೂ ಮಿಗ್ 27 ಈಗಾಗಲೇ ಯುದ್ಧ ಸೇವೆಯಿಂದ ನಿವೃತ್ತಿಯಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com