ಪುಲ್ವಾಮ ಉಗ್ರ ದಾಳಿಯಿಂದ ರಾಫೆಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವರೆಗೆ, 2019ರ ಡಿಫೆನ್ಸ್ ಮಾಹಿತಿ

2019 ಭಾರತದ ರಕ್ಷಣೆ ಮತ್ತು ಸೇನಾ ವಲಯಕ್ಕೆ ಮಹತ್ವದ  ವರ್ಷವಾಗಿದ್ದು, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದ್ದ ಭಾರತ ಮತ್ತದೇ ಪಾಕಿಸ್ತಾನದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿ ತನ್ನ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2019 ಭಾರತದ ರಕ್ಷಣೆ ಮತ್ತು ಸೇನಾ ವಲಯಕ್ಕೆ ಮಹತ್ವದ  ವರ್ಷವಾಗಿದ್ದು, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದ್ದ ಭಾರತ ಮತ್ತದೇ ಪಾಕಿಸ್ತಾನದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿ ತನ್ನ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿತ್ತು.

ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂ. ಮೀಸಲು
2019-20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಇತಿಹಾಸದಲ್ಲೇ ಅತಿ ಹೆಚ್ಚು ಅನುದಾನ ಘೋಷಣೆ ಮಾಡಿತ್ತು. ಫೆ.1 ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ  ಬಜೆಟ್ ಮಂಡನೆ ಮಾಡಿರುವ ಪೀಯೂಷ್ ಗೋಯಲ್, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದರು. 

ಪುಲ್ವಾಮ ಉಗ್ರ ದಾಳಿ
ಫೆಬ್ರವರಿ 14, 2019 ರಂದು, ಜಮ್ಮ- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಗಿತ್ತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ನ 40 ಮಂದಿ ಹುತಾತ್ಮರಾಗಿದ್ದರು. ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ 3:15ಕ್ಕೆ ಅವಾಂತಿಪುರ ಬಳಿಯ ಲೆಥ್ಪೋರದಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಸೇನಾವಾಹನಗಳಿಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತ್ತು.  ಇದರಿಂದ ಬಾಂಬ್ ಸ್ಪೋಟಗೊಂಡು, 76ಬೆಟಾಲಿಯನ್ ನ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿತ್ತು. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕ ಈ ದಾಳಿ ರೂವಾರಿಯಾಗಿದ್ದ. ಈ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಫೆಬ್ರವರಿ 25, ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ
ಫೆಬ್ರವರಿ 25ರಂದು ಪ್ರಧಾನಿ ಮೋದಿ ಇಂಡಿಯಾ ಗೇಟ್ ಬಳಿ ನಿರ್ಮಾಣವಾಗಿದ್ದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದರು. ಈ ಯುದ್ಧ ಸ್ಮಾರಕವನ್ನು 1947ರಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಣೆ ಮಾಡಿದ್ದರು. 

ಬಾಲಾಕೋಟ್ ವಾಯುದಾಳಿ
ಫೆಬ್ರವರಿ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ ಮರುದಿನವೇ ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಅತೀದೊಡ್ಡ ಉಗ್ರ ಶಿಬಿರವನ್ನು ಧ್ವಂಸ ಮಾಡಿತ್ತು. ಆ ಮೂಲಕ ಫೆಬ್ರವರಿ 14ರಂದು ಜೈಶ್ ಉಗ್ರ ಸಂಘಟನೆ ನಡೆಸಿದ್ದ ಪುಲ್ವಾಮ ಉಗ್ರ ದಾಳಿಯ ಪ್ರತೀಕಾರ ತೀರಿಸಿಕೊಂಡಿತ್ತು. ಆದರೆ ಈ ವಾಯುದಾಳಿ ಬಳಿಕ ಭಾರತೀಯ ವಾಯುಗಡಿ ದಾಟಲು ಪಾಕ್ ವಾಯುಸೇನೆಯ ಯುದ್ಧ ವಿಮಾನಗಳು ಪ್ರಯತ್ನಿಸಿದ್ದವು. ಈ ವೇಳೆ ಪಾಕಿಸ್ತಾನದ ವಾಯುಸೇನೆಯ ಜೆಟ್ ಗಳನ್ನು ಭಾರತದ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟಿಸಿತ್ತಾದರೂ ಈ ಕಾರ್ಯಾಚರಣೆಯಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದ ಎಫ್ 16ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. 

ಫೆಬ್ರುವರಿ 27: ಪಾಕ್‌ ಸೇನೆ ವಶಕ್ಕೆ ಅಭಿನಂದನ್‌, ಬಿಡುಗಡೆ
ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿದ್ದ ಮಿಗ್‌ ವಿಮಾನ ಪತನಗೊಂಡಿತ್ತು. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಪ್ಯಾರಾಚೂಟ್‌ ಸಹಾಯದಿಂದ ಇಳಿದಿದ್ದ ಅಭಿನಂದನ್‌ ಅವರನ್ನು ಪಾಕ್‌ ಸೇನೆ ವಶಕ್ಕೆ ಪಡೆದಿತ್ತು. ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಶುಕ್ರವಾರ (ಮಾರ್ಚ್‌ 1) ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು. 

ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿ ಮುಜುಗರಕ್ಕೀಡಾದ ಭಾರತೀಯ ಸೇನೆ
ಅತ್ತ ವಾಯುಸೇನೆ ದಾಳಿ ಬಳಿಕ ಭಾರತ ಮತ್ತು ಪಾಕ್ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿರುವಂತೆಯೇ ಇತ್ತ ಭಾರತೀಯ ಸೇನೆ ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿ ಮುಜುಗರಕ್ಕೀಡಾಗಿತ್ತು. ಎಂಐ17ವಿ5 ಹೆಲಿಕಾಪ್ಟರ್ ಹಾರುತ್ತಿದ್ದ ವೇಳೆ ಅದನ್ನು ಪಾಕಿಸ್ತಾನದ ಹೆಲಿಕಾಪ್ಟರ್ ಎಂದು ಭಾವಿಸಿದ ಸೇನೆ ಕ್ಷಿಪಣಿ ಮೂಲಕ ಹೊಡೆದುರುಳಿಸಿತ್ತು. ಆದರೆ ಬಳಿಕ ಅದು ನಮ್ಮದೇ ಸೇನಾ ಹೆಲಿಕಾಪ್ಟರ್ ಎಂದು ತಿಳಿದ ಬಳಿಕ ತನಿಖೆಗೆ ಆದೇಶಿಸಿದ್ದ ಸೇನಾಧಿಕಾರಿಗಳು ಬಳಿಕ ಇಬ್ಬರು ಸೇನಾಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿತ್ತು.

ರಾಫೆಲ್ ಗೆ ಶಸ್ತ್ರ ಪೂಜೆ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಅ.8ರ ವಿಜಯದಶಮಿಯಂದು ರಾಜನಾಥ್ ಸಿಂಗ್ ಅವರು ಫ್ರಾನ್ಸ್‌ನ ಬೊರ್ಡಿಯಕ್ಸ್‌ನಲ್ಲಿ ರಫೇಲ್‌ ಯುದ್ಧವಿಮಾನಕ್ಕೆ ‘ಶಸ್ತ್ರ ಪೂಜೆ’ ನೆರವೇರಿಸಿದ್ದರು. ವಿಮಾನದ ಮೇಲೆ ಓಂ ಎಂದು ಬರೆದು, ತೆಂಗಿನಕಾಯಿ ಮತ್ತು ನಿಂಬೆಹಣ್ಣಿನಿಂದ ಶಸ್ತ್ರ ಪೂಜೆ ಮಾಡಿದ್ದರು. ಸಿಂಗ್ ಅವರ ಈ ಕ್ರಮಕ್ಕೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ಷೇಪಣೆ ವ್ಯಕ್ತವಾಗಿತ್ತು. 

ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣ
ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ್ದ ಪ್ರಧಾನಿ ಮೋದಿ, 'ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರ ವಿರುದ್ಧ ಭಾರತ ಹೋರಾಟ ನಡೆಸುತ್ತದೆ. ಭಯೋತ್ಪಾದಕರಿಗೆ ಭಾರತ ಮಾತ್ರವಲ್ಲ ಗುರಿಯಾಗಿರುವ ದೇಶ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನಗಳು ಕೂಡ ಗುರಿಯಾಗಿರಿಸಿರುವ ದೇಶಗಳಾಗಿವೆ ಎಂದು ಹೇಳಿದ್ದರು. ಅಂತೆಯೇ ಮುಖ್ಯ ಸೇನಾ ಸಿಬ್ಬಂದಿ ಹುದ್ದೆ ಸೃಷ್ಟಿ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ಸೇನೆ ನಮ್ಮ ಹೆಮ್ಮೆ. ಸೇನೆಯಲ್ಲಿನ ಸಮನ್ವಯತೆಯನ್ನು ಹೆಚ್ಚು ಮಾಡಲು ನಾನು ಇಂದು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುತ್ತಿದ್ದೇನೆ. ಇನ್ನು ಮುಂದೆ ಮುಖ್ಯ ಸೇನಾ ಸಿಬ್ಬಂದಿ(Chief of Defence Staff- CDS) ಎಂಬ ಹುದ್ದೆ ಸೃಷ್ಟಿಯಾಗಲಿದೆ. ಸೇನೆ ಇನ್ನು ಮುಂದೆ ಮತ್ತಷ್ಟು ಬಲಯುತಗೊಳ್ಳಲಿದೆ ಎಂದು ಹೇಳಿದ್ದರು.

ಹುತಾತ್ಮ ಯೋಧರ ಕುಟುಂಬಗಳಿಗೂ ಆರ್ಥಿಕ ನೆರವು
ಜೂನ್ 18ರಂದು ಕೇಂದ್ರ ಸರ್ಕಾರ ಸೈನಿಕರ ಕುರಿತಂತೆ ಮಹತ್ವದ ನಿರ್ಣಯ ಕೈಗೊಂಡಿದ್ದ ಕೇಂದ್ರ ಸರ್ಕಾರ ಹುತಾತ್ಮ ಯೋಧರ ಕುಟುಂಬಗಳಿಗೆ  ಮತ್ತು ಗಾಯಾಳು ಸೈನಿಕರ ಕುಟುಂಬಸ್ಥರಿಗೆ 2 ರಿಂದ 8ಲಕ್ಷ ರೂ ಆರ್ಥಿಕ ನೆರವು ಘೋಷಣೆ ಮಾಡಿತ್ತು. ಅಂತೆಯೇ ಪ್ರಪಂಚದ ವಿವಿಧ ಮೂಲಗಳಿಗೆ ಪ್ರಯಾಣ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಅಮೆರಿಕ, ಫ್ರಾನ್ಸ್, ರಷ್ಯಾ, ಉಕ್ರೇನ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭೇಟಿ ನೀಡಿ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದರು.

ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 19ರಂದು ಹಾರಾಟ ನಡೆಸಿದರು. ರಕ್ಷಣಾ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಕೀರ್ತಿಗೆ ಪಾತ್ರರಾದರು. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನದ ಪೈಲಟ್‌ ಸಮವಸ್ತ್ರ ಧರಿಸಿ ತೇಜಸ್‌ನ ಕೋ-ಪೈಲಟ್‌ ಸ್ಥಾನದಲ್ಲಿ ಕುಳಿತು ಹಾರಾಟ ನಡೆಸಿದರು. ಆ ಮೂಲಕ ಭಾರತದ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಕ್ಷಣಾ ಸಚಿವರು ಎಂಬ ಕೀರ್ತಿಗೆ ರಾಜನಾಥ್ ಸಿಂಗ್ ಭಾಜನರಾಗಿದ್ದಾರೆ.

ಅತ್ಯಾಧುನಿಕ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳ ಹಸ್ತಾಂತರ
2019ರಲ್ಲಿ ಭಾರತೀಯ ಸೇನೆಗೆ ರಾಫೆಲ್ ಯುದ್ಧ ವಿಮಾನ, ಸುಖೋಯ್ -30 ಎಂಕೆಐ, ಅಪಾಚೆ ಹೆಲಿಕಾಪ್ಟರ್‌ಗಳು, ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್‌ಗಳು (ಎಚ್‌ಎಲ್‌ಹೆಚ್), ಡೋ 228 ಡಾರ್ನಿಯರ್ ವಿಮಾನ ಭಾರತೀಯ ಸೇನೆಗೆ ಸೇರ್ಪಡೆಗೊಂಡಿವೆ. ಅಂತೆಯೇ ಅಸ್ತ್ರ ಬಿವಿಆರ್, ಬ್ರಹ್ಮೋಸ್ ಕ್ಷಿಪಣಿಗಳನ್ನು ಸುಖೋಯ್ 30 ಎಂಕೆಐ ಯುದ್ಧ ವಿಮಾನಗಳಿಗೆ ಅಳವಡಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಮಿರಾಜ್ -2000, ಮಿಗ್ -29 ಮತ್ತು ಜಾಗ್ವಾರ್ ಡಾರಿನ್ -3 ಯುದ್ಧ ವಿಮಾನಗಳನ್ನು ಅಪ್ ಗ್ರೇಡ್ ಮಾಡಲಾಗಿತ್ತು. 

ನಾಗ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ಜುಲೈ 9ರಂದು ಡಿಆರ್ ಡಿಒ ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ‌ದ ಮೂರನೇ ತಲೆಮಾರಿನ ಶಕ್ತಿಶಾಲಿ 'ನಾಗ್‌' ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಪೊಖ್ರಣ್‌ನಲ್ಲಿ ಯಶಸ್ವಿಯಾಗಿ ನಡೆದಿದೆ. ಮೂರು ಕ್ಷಿಪಣಿಗಳನ್ನು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಪ್ರಯೋಗ ನಡೆಸಲಾಗಿದ್ದು, ಎರಡಲ್ಲೂ ಅವು ಯಶಸ್ವಿಯಾಗಿತ್ತು.

ಐಎನ್ಎಸ್ ಖಂಡೇರಿ, ಐಎನ್ಎಸ್ ನೀಲಗಿರಿ ನೌಕಾಪಡೆಗೆ ಸೇರ್ಪಡೆ!
ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಐಎಎನ್ಎಸ್ ಖಂಡೇರಿ, ಐಎನ್ಎಸ್ ನೀಲಗಿರಿ ಯುದ್ಧ ನೌಕೆಗಳನ್ನು ಸೆಪ್ಟೆಂಬರ್ ನಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾಯಿತು. 

ಆಸಿಯಾನ್ ರಕ್ಷಣಾ ಸಚಿವರ ಸಭೆಯಲ್ಲಿ ರಾಜನಾಥ್ ಸಿಂಗ್ ಭಾಗಿ
ಆಸಿಯಾನ್ ರಕ್ಷಣಾ ಸಚಿವರುಗಳ ಸಭೆಯ ಹೊರಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಜಪಾನ್ ರಕ್ಷಣಾ ಸಚಿವ ಟರೊ ಕೊನೊ ಮತ್ತು ಅಮೆರಿಕಾದ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಆಸಿಯಾನ್ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಮತ್ತು ಇತರ 8 ದೇಶಗಳ ಸಚಿವರುಗಳು ಭಾಗವಹಿಸಿದ್ದು ದೇಶಗಳ ನಡುವೆ ರಕ್ಷಣಾ ಸಹಕಾರಗಳ ಕುರಿತು ಮಾತುಕತೆ ನಡೆಸಿದರು.

ಡಿಸೆಂಬರ್ 30 ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕ
ದೇಶದ ಮೂರು ಸೇನಾಪಡೆಗಳ(ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆಯ್ಕೆಯಾಗಿದ್ದಾರೆ.

ಮೋದಿ 2.0 ಸರ್ಕಾರ: ಮೊದಲ 50 ದಿನದಲ್ಲಿ ರಕ್ಷಣಾ ಕ್ಷೇತ್ರಕ್ಕೆ 8500 ಕೋಟಿ ವೆಚ್ಚ
ಮೋದಿ 2.0 ಸರ್ಕಾರದ ಮೊದಲ 50 ದಿನದಲ್ಲೇ ರಕ್ಷಣಾ ಕ್ಷೇತ್ರಕ್ಕೆ ಈಗಾಗಲೇ 8500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.  ಭಾರತೀಯ ಸೇನೆ ಮತ್ತು ವಾಯುಪಡೆಯ ಕ್ಷಿಪಣಿಗಳು ಮತ್ತು ಬಿಡಿಭಾಗಗಳು ಸೇರಿದಂತೆ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಖರೀದಿಗಾಗಿ  ಭಾರಿ ಮೊತ್ತವನ್ನು ವ್ಯಯಿಸಲಾಗಿದೆ. ಸ್ಪೈಸ್ -2000 ಕ್ಷಿಪಣಿಗಳು, ಸ್ಟ್ರಮ್ ಅಟಾಕಾ ಎಟಿಜಿಎಂಗಳು ಮತ್ತು ಹೆಚ್ಚಿನ ಸಂಖ್ಯೆಯ ಬಿಡಿಭಾಗಗಳ ಖರೀದಿಗಾಗಿ  ಭಾರತೀಯ ವಾಯುಪಡೆ 8 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ. 

ಬಾಹ್ಯಾಕಾಶ ಬೆದರಿಕೆಗಳನ್ನು ನಿಗ್ರಹಿಸಬಲ್ಲ ಎ-ಸ್ಯಾಟ್ ಮಿಸೈಲ್ ಯಶಸ್ವಿ ಪರೀಕ್ಷೆ
ಬಾಹ್ಯಾಕಾಶದಲ್ಲಿರುವ ಸಜೀವ ಉಪಗ್ರಹವನ್ನು ಮಿಸೈಲ್ ಮೂಲಕ ಹೊಡೆದುರುಳಿಸುವ ಈ ತಂತ್ರಜ್ಞಾನ ತನ್ನದಾಗಿಸಿಕೊಳ್ಳುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ‘ಸೂಪರ್ ಪವರ್’ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂಥ ತಂತ್ರಜ್ಞಾನ ಹೊಂದಿರುವ ವಿಶ್ವದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಸಾಮರ್ಥ್ಯವನ್ನು ಹೊಂದಿದ್ದವು. ಆ್ಯಂಟಿ ಸೆಟಲೈಟ್‌- (ಎ ಸ್ಯಾಟ್‌) ಕ್ಷಿಪಣಿಯ ಯಶಸ್ದೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಅಂತೆಯೇ 'ಈ ಸಾಧನ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣದ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com