ಮುಯ್ಯಿಗೆ ಮುಯ್ಯಿ; ಸಿಬಿಐ ಮಾಜಿ ನಿರ್ದೇಶಕರ ಸಂಸ್ಥೆ ಮೇಲೆ ಕೋಲ್ಕತ್ತಾ ಪೊಲೀಸರ ದಾಳಿ

ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ನಡುವಿನ ಒಳಜಗಳ ಮತ್ತೊಂದು ಹಂತಕ್ಕೆ ತಲುಪಿದ್ದು ಸಿಬಿಐ ...
ಎಂ ನಾಗೇಶ್ವರ ರಾವ್
ಎಂ ನಾಗೇಶ್ವರ ರಾವ್

ಕೋಲ್ಕತ್ತಾ: ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ನಡುವಿನ ಒಳಜಗಳ ಮತ್ತೊಂದು ಹಂತಕ್ಕೆ ತಲುಪಿದ್ದು ಸಿಬಿಐ ಮಾಜಿ ಮಧ್ಯಂತರ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರಿಗೆ ಸೇರಿದ ಸಂಸ್ಥೆ ಮೇಲೆ ಕೋಲ್ಕತ್ತಾ ಪೊಲೀಸರು ದಾಳಿ ನಡೆಸಿದ್ದಾರೆ. ನಾಗೇಶ್ವರ ರಾವ್ ಅವರ ನಿರ್ದೇಶನದಲ್ಲಿಯೇ ಇತ್ತೀಚೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಏಂಜೆಲಾ ಮರ್ಕೆಂಟೈಲ್ ಪ್ರೈವೆಟ್ ಲಿಮಿಟೆಡ್ ನಲ್ಲಿ ನಾಗೇಶ್ವರ ರಾವ್ ಅವರ ಪತ್ನಿ ಮತ್ತು ಮಗಳ ಹಣಕಾಸು ವ್ಯವಹಾರಗಳ ಕುರಿತು ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಸ್ಥೆಯ ಮಾಲಿಕರನ್ನು ನಾಳೆ ಕೋಲ್ಕತ್ತಾ ಪೊಲೀಸರು ವಿಚಾರಣೆ ನಡೆಸಬಹುದು ಎಂದು ಹೇಳಲಾಗುತ್ತಿದೆ. ಬೌಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಇಂದು ಶಿಲ್ಲಾಂಗ್ ನಲ್ಲಿ ಸಿಬಿಐ ಪೊಲೀಸರು ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿಚಾರಣೆ ನಡೆಸಲಿದ್ದು ಅದಕ್ಕೆ ಒಂದು ದಿನ ಮೊದಲು ಅಂದರೆ ನಿನ್ನೆ ಸಿಬಿಐ ಮಾಜಿ ಅಧಿಕಾರಿ ಮೇಲೆ ದಾಳಿ ನಡೆದಿದೆ. ನಿನ್ನೆ ಜಲ್ಪೈಗುರಿ ಜಿಲ್ಲೆಯ ಮೈನಗುರಿಯಲ್ಲಿ ಕೋಲ್ಕತ್ತಾ ಹೈಕೋರ್ಟ್ ಸರ್ಕ್ಯೂಟ್ ನ್ಯಾಯಪೀಠವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಪಶ್ಚಿಮ ಬಂಗಾಳ ಸರ್ಕಾರ ಭೂಮಿ ಮತ್ತು ಹಣ ಒದಗಿಸಿದರೂ ಕೂಡ ಯೋಜನೆಯ ರಾಜಕೀಯ ಲಾಭ ಪಡೆಯಲು ನರೇಂದ್ರ ಮೋದಿಯವರು ನೋಡುತ್ತಿದ್ದಾರೆ. ಮದುವೆ ಮನೆಯಲ್ಲಿ ಮದುಮಗಳು ಮತ್ತು ಮದುಮಗ ಇಲ್ಲದಿದ್ದರೂ ಕೂಡ ಬ್ಯಾಂಡ್ ಬಾರಿಸುವ ಬ್ಯಾಂಡ್ ವಾಲಾನ ರೀತಿಯಲ್ಲಾಗಿದೆ ಪ್ರಧಾನ ಮಂತ್ರಿ ಪರಿಸ್ಥಿತಿ ಎಂದು ಟೀಕಿಸಿದ್ದಾರೆ.
ನಾಗೇಶ್ವರ್ ರಾವ್ ಅವರ ಪತ್ನಿ ಮನ್ನೆಮ್ ಸಂಧ್ಯಾ 2011ರಲ್ಲಿ ಏಂಜೆಲಾ ಮರ್ಕೆಂಟೈಲ್ ನಿಂದ ಪಡೆದ 25 ಲಕ್ಷ ರೂಪಾಯಿ ಸಾಲ, ಸಂಸ್ಥೆಗೆ 1.5 ಕೋಟಿ ರೂಪಾಯಿ ಪಾವತಿ ಮತ್ತು ನಾಗೇಶ್ವರ್ ರಾವ್ ಅವರ ಪುತ್ರಿಗೆ ಏಂಜೆಲಾ ನೀಡಿದ್ದ 14 ಲಕ್ಷ ರೂಪಾಯಿ ವೇತನ ಬಗ್ಗೆ ವಹಿವಾಟುಗಳ ಮಾಹಿತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com