ಕೇಜ್ರಿವಾಲ್ ಗೆ ಹಿನ್ನಡೆ, ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರ ಹೆಚ್ಚು ಎಂದ ಸುಪ್ರೀಂ!

ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರಗಳ ನಡುವಿನ ತಿಕ್ಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರಗಳ ನಡುವಿನ ತಿಕ್ಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಸರ್ಕಾರಕ್ಕಿಂತಲೂ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಆದರೆ ದ್ವಿಸದಸ್ಯ ಪೀಠದ ಜಡ್ಜ್ ಗಳ ತೀರ್ಪಿನಲ್ಲಿ ಭಿನ್ನತೆ ಇದ್ದ ಕಾರಣ ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದ ಉನ್ನತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಇಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾ ಎ.ಕೆ. ಸಿಕ್ರಿ ಮತ್ತು ನ್ಯಾ ಅಶೋಕ್ ಭೂಷಣ್ ಅವರ ನೇತೃತ್ವದ ದ್ವಿಸದಸ್ಯ ಪೀಠ, ದೆಹಲಿ ಆಡಳಿತದಲ್ಲಿ ಅಲ್ಲಿಯ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದೆಹಲಿ ಲೆಫ್ಟಿನೆಂಟ್ ರಾಜ್ಯಪಾಲರ ಕೈಯಲ್ಲೇ ಇರಲಿದೆ. ಹಾಗೆಯೇ, ಕೇಜ್ರಿವಾಲ್ ಸರ್ಕಾರ ಬಲವಾಗಿ ಒತ್ತಾಯಿಸುತ್ತಿರುವ ಪೊಲೀಸ್ ಇಲಾಖೆಯ ನಿಯಂತ್ರಣ ಕೂಡ ಎಲ್​ಜಿ ಅವರ ಬಳಿಯೇ ಇರಲಿದೆ. ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವೂ ಎಲ್​ಜಿ ಅವರ ಬಳಿಯೇ ಇರಬೇಕು ಎಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಇಬ್ಬರೂ ನ್ಯಾಯಮೂರ್ತಿಗಳು ಬಹುತೇಕ ಒಂದೇ ಅಭಿಪ್ರಾಯಕ್ಕೆ ಬಂದರಾದರೂ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಇವತ್ತು ಆರು ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ನಾಲ್ಕು ಎಲ್​ಜಿ ಪರವಾಗಿದ್ದರೆ, ಇನ್ನೆರಡು ದೆಹಲಿ ಸರ್ಕಾರದ ಪರವಾಗಿವೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಗ್ರೇಡ್ 1 ಮತ್ತು 2 ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ, ಕಮಿಷನ್ ಆಫ್ ಎನ್ ಕ್ವೈರಿ ಇವು ಎಲ್​ಜಿ ಮೂಲಕ ಕೇಂದ್ರ ಸರ್ಕಾರ ನಿಯಂತ್ರಣದಲ್ಲೇ ಇರಲಿವೆ ಎಂದು ನ್ಯಾಯಪೀಠ ತೀರ್ಮಾನಕ್ಕೆ ಬಂದಿವೆ. 
ಅಂತೆಯೇ ವಿದ್ಯುತ್ ಸುಧಾರಣೆ ಕಾಯ್ದೆಯ ಅಧಿಕಾರವನ್ನು ದೆಹಲಿ ಸರ್ಕಾರಕ್ಕೆ ನೀಡಲಾಗಿದೆ. ಕೃಷಿ ಭೂಮಿಯ ಕನಿಷ್ಠ ದರದ ಪರಿಷ್ಕರಣೆಯ ಅಧಿಕಾರವು ದೆಹಲಿ ಸರ್ಕಾರಕ್ಕೆ ಇದೆಯಾದರೂ ಎಲ್​ಜಿ ಅವರು ಅಗತ್ಯಬಿದ್ದಲ್ಲಿ ರಾಷ್ಟ್ರಪತಿಗಳ ಗಮನಕ್ಕೆ ತರುವ ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಆದರೆ, ಸೇವೆಗಳ ವಿಚಾರದಲ್ಲಿ ಇಬ್ಬರು ನ್ಯಾಯಮೂರ್ತಿಗಳು ತದ್ವಿರುದ್ಧ ತೀರ್ಪು ನೀಡಿದ್ದು,  ನ್ಯಾ ಎಕೆ ಸಿಕ್ರಿ ಅವರು ಕೇಂದ್ರ ಸರ್ಕಾರದ ಪರ ತೀರ್ಪು ಕೊಟ್ಟರೆ, ನ್ಯಾ ಅಶೋಕ್ ಭೂಷಣ್ ಅವರು ದೆಹಲಿ ಸರ್ಕಾರಕ್ಕೆ ಅಧಿಕಾರ ಇರಬೇಕೆಂದು ಹೇಳಿದರು. ಈ ಒಂದು ವಿಚಾರದಲ್ಲಿ ದ್ವಿಸದಸ್ಯ ನ್ಯಾಯಪೀಠವು ಒಮ್ಮತಕ್ಕೆ ಬರಲಾಗಲಿಲ್ಲ. ಹೀಗಾಗಿ, ಸರ್ವಿಸ್ ಅಧಿಕಾರ ಯಾರಿಗೆ ಸಿಗಬೇಕೆಂಬ ವಿಚಾರದ ನಿರ್ಣಯಕ್ಕಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಲಯದ ತ್ರಿದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಕಳೆದ ವರ್ಷ ಆಡಳಿತಾತ್ಮಕ ವಿಚಾರದಲ್ಲಿ ರಾಷ್ಟ್ರ ರಾಜಧಾನಿಯ ಸಿಎಂ ಅರವಿಂದ್​ ಕೇಜ್ರಿವಾಲ್​ ಹಾಗೂ ಲೆಫ್ಟಿನೆಂಟ್​ ಅನಿಲ್​ ಬೈಜಲ್​ ನಡುವೆ ಉಂಟಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈ ಕೋರ್ಟ್​ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್​ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ಅರ್ಜಿ ಆಲಿಸಿದ ಸುಪ್ರೀಂಕೋರ್ಟ್​ ಸಂವಿಧಾನಿಕ ಪೀಠ ದೆಹಲಿಗೆ ರಾಜ್ಯದ ಸ್ಥಾನ ನೀಡಲು ಸಾಧ್ಯವಿಲ್ಲ. ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬಹುದೇ ಹೊರತು ಆ ಅಧಿಕಾರವನ್ನು ಸಾಮಾನ್ಯ ಸಂದರ್ಭಗಳಲ್ಲಿ ಪ್ರಯೋಗಿಸುವಂತಿಲ್ಲ.  ರಾಜ್ಯದ ನಿಜವಾದ ಅಧಿಕಾರವಿರುವುದು ಮುಖ್ಯಮಂತ್ರಿಗಳಿಗೆ ಎಂದು ತೀರ್ಪು ನೀಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com