ಪುಲ್ವಾಮಗಿಂತಲೂ ದೊಡ್ಡ ದಾಳಿಗೆ ಜೈಶ್ ಉಗ್ರ ಸಂಘಟನೆ ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ

44 ಯೋಧರ ಧಾರುಣ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿಯನ್ನೂ ಮೀರಿಸುವ ಅತೀ ದೊಡ್ಡ ಉಗ್ರ ದಾಳಿಗೆ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 44 ಯೋಧರ ಧಾರುಣ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿಯನ್ನೂ ಮೀರಿಸುವ ಅತೀ ದೊಡ್ಡ ಉಗ್ರ ದಾಳಿಗೆ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿದ್ದರು. ಇದರಿಂದ ಉತ್ತೇಜಿತಗೊಂಡಿರುವ ಜೈಶ್ ಇ ಮೊಹಮದ್ ಉಗ್ರ ಸಂಘಟನೆ, ಇದಕ್ಕಿಂತಲೂ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ಈ ಬೃಹತ್ ಆಪರೇಷನ್ ಗಾಗಿ ಜೈಶ್ ಉಗ್ರ ಸಂಘಟನೆ 500ಕೆಜಿ ಸ್ಫೋಟಕ ಸಂಗ್ರಹಿಸುವಂತೆ ತನ್ನ ಉಗ್ರರಿಗೆ ಕರೆ ನೀಡಿದ್ದು, ಅಲ್ಲದೆ ಆತ್ಮಹತ್ಯಾ ದಾಳಿಗಾಗಿ ಯುವಕರ ದೊಡ್ಡ ಪಡೆಯನ್ನೇ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದಲ್ಲಿ ನೆಲೆಯೂರಿರುವ ಜೈಷ್‌ ಸಂಘಟನೆಯ ನಾಯಕರು ಹಾಗೂ ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರ ನಡುವಣ ಸಂಭಾಷಣೆಯನ್ನು ಫೆಬ್ರವರಿ16 ಹಾಗೂ 17ರಂದು ಭದ್ರತಾ ಪಡೆಗಳು ಭೇದಿಸಿದ್ದು, ಈ ವೇಳೆ ಈ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ಭಾರತೀಯ ಭದ್ರತಾ ಪಡೆಗಳಿಗೆ ಘನಘೋರ ಹಾನಿ ಉಂಟು ಮಾಡಲು ಮತ್ತೊಂದು ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಈ ಸಂಭಾಷಣೆ ವೇಳೆ ಚರ್ಚೆ ನಡೆದಿದೆ. ಈ ದಾಳಿ ಜಮ್ಮು-ಕಾಶ್ಮೀರದಲ್ಲಿ ಬೇಕಾದರೂ ನಡೆಯಬಹುದು ಅಥವಾ ಅದರಿಂದ ಹೊರಗೆ ಬೇಕಾದರೂ ನಡೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಮೂವರು ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಜೈಷ್‌ ಸಂಘಟನೆಯ 21 ಉಗ್ರರು ಕಳೆದ ಡಿಸೆಂಬರ್ ನಲ್ಲಿ ಕಾಶ್ಮೀರಕ್ಕೆ ನುಸುಳಿದ್ದರು. ಅವರು ಇನ್ನು ಸಕ್ರಿಯರಾಗಿ ದಾಳಿಗೆ ಇಳಿಯಬಹುದು ಎಂಬ ಆತಂಕವನ್ನು ಗುಪ್ತಚರ ಇಲಾಖೆ ನೀಡಿದೆ. 
ಪುಲ್ವಾಮ ದಾಳಿಕೋರ ಉಗ್ರ ಅದಿಲ್‌ ದಾರ್ ನ ವಿಡಿಯೋ ಮೂಲಕ ಕಾಶ್ಮೀರಿ ಯುವಕರಿಗೆ ಗಾಳ
ಇದೇ ವೇಳೆ, ಪುಲ್ವಾಮಾ ಆತ್ಮಾಹುತಿ ಬಾಂಬ್‌ ದಾಳಿಗೆ ಹೇಗೆ ಯೋಜನೆ ರೂಪಿಸಲಾಯಿತು ಎಂಬುದರ ಕುರಿತು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಕಾಶ್ಮೀರದಲ್ಲಿನ ಯುವಕರನ್ನು ತನ್ನ ಸಂಘಟನೆಯತ್ತ ಸೆಳೆಯಲು ಮತ್ತೊಂದು ಯೋಜನೆಯನ್ನು ಕೂಡ ಜೈಶ್ ಉಗ್ರ ಸಂಘಟನೆ ಹಾಕಿಕೊಂಡಿರುವ ಮಾಹಿತಿ ಕೂಡ ಭದ್ರತಾ ಪಡೆಗಳಿಗೆ ತಿಳಿದಿದೆ.
ಫೆ.14ರ ಪುಲ್ವಾಮಾ ದಾಳಿ ನಡೆದ ಬೆನ್ನಲ್ಲೇ ದಾಳಿಕೋರ ಉಗ್ರ ಅದಿಲ್‌ ದಾರ್ ನ ವಿಡಿಯೋ ಬಿಡುಗಡೆ ಮಾಡುವ ಮೂಲಕ ಆ ಸ್ಫೋಟ ನಡೆಸಿದ್ದು ತಾನೇ ಎಂದು ಜೈಷ್‌ ಸಂಘಟನೆ ಘೋಷಿಸಿತ್ತು. ಇನ್ನು ಮುಂದೆ ದಾರ್ ನನ್ನು ವೈಭವೀಕರಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಿ, ಕಾಶ್ಮೀರಿ ಯುವಕರ ಮನಗೆಲ್ಲಲು ಯತ್ನಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ತಿಂಗಳಿನಿಂದ ಜೈಷ್‌ ಸಂಘಟನೆ ಕಾಶ್ಮೀರದಲ್ಲಿ 50ರಿಂದ 60 ಯುವಕರನ್ನು ತನ್ನ ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com