ಬೆಳಿಗ್ಗೆ 9.30ಕ್ಕೆ ಕಚೇರಿ ತಲುಪಿ, ಮನೆಯಿಂದ ಕೆಲಸ ಮಾಡುವುದನ್ನು ತಪ್ಪಿಸಿ: ಸಚಿವರಿಗೆ ಪ್ರಧಾನಿ ಮೋದಿ ತಾಕೀತು

ಕೆಲಸದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಟ್ಟುನಿಟ್ಟು, ಶಿಸ್ತಿನ ವ್ಯಕ್ತಿ ಎಂಬ ಮಾತು ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಕೆಲಸದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಟ್ಟುನಿಟ್ಟು, ಶಿಸ್ತಿನ ವ್ಯಕ್ತಿ ಎಂಬ ಮಾತು ಮೊದಲಿನಿಂದಲೇ ಇದೆ. 
ಕಚೇರಿಗಳಲ್ಲಿ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವ ನಿಯಮವಿರುವಂತೆ ಸಚಿವರುಗಳು ಕೂಡ ತಮ್ಮ ಕಚೇರಿಗೆ ನಿಗದಿತ ಸಮಯಕ್ಕೆ ಬರಬೇಕು, ಬೇಕಾಬಿಟ್ಟಿ ತಮ್ಮ ಇಷ್ಟ ಬಂದಂತೆ, ಇಷ್ಟ ಬಂದಾಗ ಕಚೇರಿಗೆ ಬರುವುದಲ್ಲ, ಆಯಾ ದಿನದ ಕೆಲಸ ಮಾಡಿ ಮುಗಿಸಬೇಕು, ಜನರ ಕುಂದು ಕೊರತೆಗಳನ್ನು ಆಲಿಸಬೇಕು ಎಂಬ ಕಡ್ಡಾಯ ಫರ್ಮಾನ್ ಹೊರಡಿಸಿದ್ದಾರೆ ಮೋದಿಯವರು.
ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ನಿನ್ನೆ ನಡೆದ ಮಂತ್ರಿ ಪರಿಷತ್ತಿನ ಮೊದಲ ಸಭೆಯಲ್ಲಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕೆಲವು ಖಡಕ್‌ ಸೂಚನೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 9.30ರೊಳಗೆ ಕಚೇರಿಗೆ ತಪ್ಪದೇ ಹಾಜರಾಗಿರಬೇಕು. ಮನೆಯಿಂದ ಮತ್ತು ಇತರ ಸ್ಥಳಗಳಲ್ಲಿ ಕೂತು ಕಾರ್ಯನಿರ್ವಹಿಸಬೇಡಿ, ನೀವು ಮಾಡುವ ಕೆಲಸಗಳಿಂದ ಬೇರೆಯವರಿಗೆ ಮಾದರಿಯಾಗಿರಿ ಎಂದು ಕಿವಿಮಾತು ಹೇಳಿದ್ದಾರೆ. ಅಲ್ಲದೆ 40 ದಿನಗಳ ಸಂಸತ್ತು ಕಲಾಪದ ವೇಳೆ ಸಂಸದರು ಯಾವುದೇ ಬೇರೆ ವ್ಯವಹಾರ, ಭೇಟಿ, ಹೊರಗಡೆ ಹೋಗುವ ಕೆಲಸ ಇಟ್ಟುಕೊಳ್ಳಬೇಡಿ, ಸಂಸತ್ತು ಕಲಾಪಕ್ಕೆ ಪ್ರತಿದಿನ ಹಾಜರಾಗಿ ಎಂದು ಹೇಳಿದ್ದಾರೆ.
ಮುಖ್ಯವಾದ ಕಡತಗಳನ್ನು ಸಚಿವರು ರಾಜ್ಯ ಖಾತೆ ಸಚಿವರೊಂದಿಗೆ ಹಂಚಿಕೊಂಡು ಕೆಲಸ ತ್ವರಿತಗತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು ಎಂದೂ ತಾಕೀತು ಮಾಡಿದ್ದಾರೆ. ಅಲ್ಲದೆ ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ, ಸಂಸದರೊಂದಿಗೆ ಸಂಪರ್ಕದಲ್ಲಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯ ಖಾತೆ ಸಚಿವರೊಂದಿಗೆ ಪ್ರಮುಖ ಯೋಜನೆಗಳ ಕಡತಗಳನ್ನು ಸಂಪುಟ ಸಚಿವರು ಹಂಚಿಕೊಳ್ಳಬೇಕು. ಆ ಮೂಲಕ ಹಿರಿಯ ಸಚಿವರು ಕಿರಿಯರಿಗೆ ಮತ್ತು ಹೊಸದಾಗಿ ಸಚಿವರಾಗಿರುವವರಿಗೆ ಮಾರ್ಗದರ್ಶನ ಮಾಡಬೇಕು. ಸಚಿವಾಲಯದ ಹಲವು ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಚಿವರು ಚರ್ಚಿಸಬೇಕು. ಸಂಸದರನ್ನು, ಸಾರ್ವಜನಿಕರನ್ನು ಆಗಾಗ್ಗೆ ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ. ಐದು ವರ್ಷಗಳ ಸಚಿವಾಲಯ ಅಜೆಂಡಾ ಈಗಲೇ ಸಿದ್ಧವಿರಲಿ ಎಂದು ಪ್ರಧಾನಿ ಸಲಹೆ ಮಾಡಿದ್ದಾರೆ. 
ತಮ್ಮ ಉದಾಹರಣೆ ಕೊಟ್ಟ ಮೋದಿ: ತಾವು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕಾರ್ಯವೈಖರಿಯನ್ನೇ ಸಚಿವರುಗಳಿಗೆ ಉದಾಹರಣೆಯಾಗಿ ಕೊಟ್ಟ ಮೋದಿಯವರು, ಸರ್ಕಾರದ ಕಚೇರಿಗಳಲ್ಲಿ ಅಧಿಕಾರಿಗಳು ಬೆಳಗ್ಗೆ ಬರುವಷ್ಟರ ಹೊತ್ತಿಗೆ ನಾನು ಕೂಡ ಕಚೇರಿಗೆ ಬಂದಿರುತ್ತಿದ್ದೆ. ಅದರಿಂದ ಆಯಾ ದಿನದ ಸರ್ಕಾರದ ಕೆಲಸಗಳನ್ನು ತ್ವರಿತವಾಗಿ ಮಾಡಲು ಸಹಾಯವಾಗುತ್ತಿತ್ತು ಎಂದು ನೆನಪಿಸಿಕೊಂಡರಂತೆ. 
ಕಡತಗಳ ಶೀಘ್ರ ರವಾನೆ: ಸಚಿವಾಲಯದೊಳಗೆ ಹಾಗೂ ಸಚಿವಾಲಯಗಳ ನಡುವೆ ಪ್ರಮುಖ ಯೋಜನೆಯ ಕಡತಗಳ ಶೀಘ್ರ ರವಾನೆಗೆ ಸಂಪುಟ ಸಚಿವರು ಮತ್ತು ಅವರ ಕಿರಿಯ ಸಹೋದ್ಯೋಗಿಗಳು ಒಟ್ಟಾಗಿ ಕೂತು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಅನಗತ್ಯ ವಿಳಂಬ ಬೇಡ. ಇದರಿಂದ ಸಚಿವಾಲಯದ ಕೆಲಸಗಳ ವೇಗ ವೃದ್ಧಿಸುತ್ತದೆ, ಆಡಳಿತದ ಮೊದಲ 100 ದಿನಗಳ ಅಗತ್ಯದ ಕೆಲಸಗಳನ್ನು ಕೂಡ ಆದ್ಯತೆಯಾಗಿ ತೆಗೆದುಕೊಳ್ಳಿ ಎಂದು ಪ್ರಧಾನಿ ಮೋದಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. 
ಇದಕ್ಕೂ ಮುನ್ನ ಕೇಂದ್ರ ಸಂಪುಟ ಕಳೆದ ಮಾರ್ಚ್ ನಲ್ಲಿ ಹೊರಡಿಸಿದ್ದ ವಿಧೇಯಕವನ್ನು ಬದಲಾಯಿಸುವ ಕೇಂದ್ರ ಶಿಕ್ಷಣ ಸಂಸ್ಥೆ(ಬೋಧಕ ಹುದ್ದೆಗಳಲ್ಲಿ ಮೀಸಲಾತಿ)ಮಸೂದೆ 2019ಕ್ಕೆ ಅಂಗೀಕಾರ ನೀಡಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 7 ಸಾವಿರ ಬೋಧಕ ಹುದ್ದೆಗಳ ನೇಮಕ ಆರಂಭಕ್ಕೆ ಅನುಕೂಲವಾಗುವ ಮಸೂದೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com