ಯಾಕೆ ಹೊಡೆದೆ ಅಂತ ಗೊತ್ತಿಲ್ಲ, ಆದ್ರೆ ಪಶ್ಚಾತ್ತಾಪವಾಗುತ್ತಿದೆ: ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ

ಮೇ 4ರಂದು ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಯಾಕೆ ಕಪಾಳಮೋಕ್ಷ ಮಾಡಿದೆ...
ಸುರೇಶ್
ಸುರೇಶ್
ನವದೆಹಲಿ: ಮೇ 4ರಂದು ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಯಾಕೆ ಕಪಾಳಮೋಕ್ಷ ಮಾಡಿದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಆದರೆ ನನಗೆ ನಿಜಕ್ಕೂ ಪಶ್ಚಾತಾಪವಾಗುತ್ತಿದೆ ಎಂದು ಸಿಎಂ ಮೇಲೆ ಕೈಮಾಡಿದ ವ್ಯಕ್ತಿ ಸುರೇಶ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಮೇಲೆ ನಾನು ಯಾಕೆ ಕೈಮಾಡಿದೆ ಅಂತ ಗೊತ್ತಿಲ್ಲ. ಆ ಬಗ್ಗೆ ನಾನು ವಿಷಾದಿಸುತ್ತೇನೆ ಎಂದು ಸುರೇಶ್ ಎಎನ್ಐಗೆ ತಿಳಿಸಿದ್ದಾರೆ.
ಇದೇ ವೇಳೆ, ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದಿರುವ ಸುರೇಶ್, ತನಗೆ ಹೀಗೆ ಮಾಡು ಎಂದು ಯಾರು ಕೂಡ ಹೇಳಿಲ್ಲ. ಪೊಲೀಸರು ಸಹ ದುರ್ವರ್ತನೆ ತೋರಿಲ್ಲ. ನಾನು ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮೇ 4ರಂದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಮೋತಿನಗರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕೇಜ್ರಿವಾಲ್ ಅವರ ಕಾರನ್ನು ಹತ್ತಿದ 33 ವರ್ಷದ ಸುರೇಶ್ ಸಿಎಂಗೆ ಕಪಾಳಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಕ್ಷಣ ಕೇಜ್ರಿವಾಲ್ ಅವರ ರಕ್ಷಣೆಗೆ ಧಾವಿಸಿದ ಬೆಂಬಲಿಗರು, ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಸಿಎಂ ಕೇಜ್ರಿವಾಲ್‌ ಮೇಲೆ ನಡೆದಿರುವ ಹಲ್ಲೆ ಪ್ರತಿಪಕ್ಷ ಪ್ರಾಯೋಜಿತ ಎಂದು ಆಪ್‌ ಆರೋಪಿಸಿತ್ತು. ಸಿಎಂ ಭದ್ರತೆ ವಿಚಾರದಲ್ಲಿ ನಡೆದ ಮತ್ತೊಂದು ಲೋಪದ ನಿದರ್ಶನ ಇದಾಗಿದೆ. ಜತೆಗೆ ಹೇಡಿತನದ ಕೃತ್ಯವಾಗಿದ್ದು, ದೆಹಲಿಯಲ್ಲಿ ಆಪ್‌ ಜನಪ್ರಿಯತೆಯನ್ನು ತಡೆಯುವ ಹುನ್ನಾರ ಎಂದು ಟ್ವೀಟ್‌ ಮಾಡಿತ್ತು.
ಪ್ರಸ್ತುತ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಝಡ್‌ ಪ್ಲಸ್‌ ಭದ್ರತೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com