ಜೂನ್‌ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆ

ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ತಿಳಿಸಿದೆ.
ಸಾಮಾನ್ಯವಾಗಿ ಮುಂಗಾರು ಮಳೆ ಜೂನ್‌ 1ರಂದು ಕೇರಳ ಕರಾವಳಿ ಪ್ರವೇಶಿಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಸಕಾಲದಲ್ಲಿ ಮುಂಗಾರು ಮಳೆ ಆಗಮಿಸಿದಲ್ಲಿ ದೇಶದಲ್ಲಿ ಭತ್ತ, ಸೋಯಾಬೀನ್‌ ಮತ್ತು ಹತ್ತಿ ಬೆಳೆ ಬಿತ್ತನೆ ಕಾರ್ಯಗಳು ಸಾಂಗವಾಗಿ ನಡೆಯಲು ಸಾಧ್ಯ.
2019ರಲ್ಲಿ ದೇಶದಲ್ಲಿ ದೀರ್ಘಾವಧಿ ಸರಾಸರಿ ಶೇ. 93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್‌ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಫೋನಿ ಚಂಡಮಾರುತ ಸೇರಿದಂತೆ ಮತ್ತಿತರ ಹಮಾಮಾನ ಕಾರಣಗಳಿಂದಾಗಿ ಈ ಬಾರಿ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.
ಕೇಂದ್ರ ಹವಾಮಾನ ಇಲಾಖೆ ಕಳುಹಿಸಿರುವ ಸೂಚನೆಯಂತೆ ಮುಂಗಾರು ಮಳೆಯಲ್ಲಿ ಸ್ವಲ್ಪ ಮಟ್ಟಿಗೆ ಕೊರತೆ ಎದುರಾಗಲಿದ್ದು, ಮತ್ತೊಂದು ಖಾಸಗಿ ಸಂಸ್ಥೆ ಅಂದಾಜಿಸಿರುವಂತೆ ರಾಜ್ಯದಲ್ಲಿ ಶೇ 10 ರಿಂದ 15 ರಷ್ಟು ಮಳೆ ಕೊರತೆ ಎದುರಾಗಬಹುದು ಎನ್ನಲಾಗಿದೆ.  
ಹಾಗೆಂದು ಕಳವಳ ಪಡಬೇಕಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಮುಂಗಾರು ಮಾರುತ ಕಡಿಮೆಯಾಗಬಹುದು. ಆದರೆ ಜೂನ್ ಮೊದಲ ವಾರದಲ್ಲಿ ಕೇಂದ್ರ ಹವಾಮಾನ ಇಲಾಖೆ ದೇಶದ ನಾಲ್ಕು ವಿಭಾಗಗಳಿಗೆ ಮತ್ತೊಂದು ಸುತ್ತಿನ ಮುನ್ಸೂಚನೆ ಕಳುಹಿಸಲಿದ್ದು, ಅದರಲ್ಲಿ ಮಳೆ ಪರಿಸ್ಥಿತಿ ಕುರಿತು ಅಧಿಕೃತ ಮತ್ತು ಖಚಿತ ಮಾಹಿತಿ ದೊರೆಯಲಿದೆ.
ಮುಂಗಾರು ಮಳೆ ಶೇ 94 ರಿಂದ 104 ರಷ್ಟಿದ್ದರೆ ಅದು ವಾಡಿಕೆ ಮಳೆಯಾಗುತ್ತದೆ. ರಾಜ್ಯದಲ್ಲಿ ಒಟ್ಟು ಬೀಳುವ ಮಳೆಯ ಪೈಕಿ ಶೇ 72 ರಷ್ಟು ಮಳೆ ಮುಂಗಾರು ಅವಧಿಯಲ್ಲಿ ಸುರಿಯುತ್ತದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಹೆಚ್ಚುವರಿಯಾಗಿ 100 ಮಳೆ ಮಾಪನ ಕೇಂದ್ರಗಳನ್ನು ಅಡವಳಿಸಲಾಗಿದೆ. ಅಗತ್ಯವಿರುವ ಗ್ರಾಮ ಪಂಚಾಯತ್ ಗಳಲ್ಲಿ ಎರಡು ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮಳೆ ಕುರಿತು ಖಚಿತ ಮಾಹಿತಿ ರಾಜ್ಯ ಹವಾಮಾನ ಇಲಾಖೆಗೆ ಲಭ್ಯವಾಗುತ್ತಿದೆ.
ಕಳೆದ ಬಾರಿ ಮುಂಗಾರು ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿತ್ತು. ಮಡಿಕೇರಿ ಹಾಗೂ ಮಲೆನಾಡಿನ ಹಲವು ಭಾಗಗಳಲ್ಲಿ ಭೂ ಕುಸಿತ ಸಂಭವಿಸಿತ್ತು. ಒಟ್ಟಾರೆ ಸುಮಾರು 900 ಟಿಎಂಸಿ. ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿತ್ತು. ಮುನ್ನೆಚ್ಚರಿಕೆ ವಹಿಸಿ ಈ ಪೈಕಿ ಕನಿಷ್ಠ 100 ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಳಸಿಕೊಂಡಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತಿತ್ತು. ಈ ಬಾರಿಯೂ ಸಹ ಮುಂಗಾರು ಮಳೆಯ ಸಂದರ್ಭದಲ್ಲಿ ಎದುರಾಗಲಿರುವ ವಿಪತ್ತು ನಿಭಾಯಿಸಲು ರಾಜ್ಯ ಸರ್ಕಾರ ಗೃಹ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿ ಈಗಾಗಲೇ ಕೊಡಗು ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಮಳೆ ಹಾನಿ ಸಂಭವಿಸಿದರೆ ಪರಿಸ್ಥಿತಿ ಎದುರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com