ಶಿವಸೇನೆ-ಎನ್'ಸಿಪಿ-ಕಾಂಗ್ರೆಸ್ ಮೈತ್ರಿಗೆ ಶೀಘ್ರದಲ್ಲೇ ಅಂತಿಮ ರೂಪ: ಮಹಾ ಸರ್ಕಾರ ರಚನೆಗೆ ಹೊಸ ಟೀಂ ಸಿದ್ಧ

ಶಿವಸೇನೆ-ಎನ್'ಸಿಪಿ-ಕಾಂಗ್ರೆಸ್ ಮೈತ್ರಿಯು ಮಹಾರಾಷ್ಟ್ರದಲ್ಲಿ ನಿಧಾನಗತಿಯಲ್ಲಿ ರೂಪ ಪಡೆದುಕೊಳ್ಳುತ್ತಿದೆ. ಸರ್ಕಾರ ನಡೆಸಲು ಮೂರೂ ಪಕ್ಷಗಳು ಬಹುತೇಕವಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿ ರೂಪಿಸುವುದರಲ್ಲಿ ಯಶಸ್ವಿಯಾಗಿವೆ...
ಸೋನಿಯಾ ಗಾಂಧಿ ಮತ್ತು ಶರದ್ ಪವಾರ್
ಸೋನಿಯಾ ಗಾಂಧಿ ಮತ್ತು ಶರದ್ ಪವಾರ್

ಮುಂಬೈ: ಶಿವಸೇನೆ-ಎನ್'ಸಿಪಿ-ಕಾಂಗ್ರೆಸ್ ಮೈತ್ರಿಯು ಮಹಾರಾಷ್ಟ್ರದಲ್ಲಿ ನಿಧಾನಗತಿಯಲ್ಲಿ ರೂಪ ಪಡೆದುಕೊಳ್ಳುತ್ತಿದೆ. ಸರ್ಕಾರ ನಡೆಸಲು ಮೂರೂ ಪಕ್ಷಗಳು ಬಹುತೇಕವಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿ ರೂಪಿಸುವುದರಲ್ಲಿ ಯಶಸ್ವಿಯಾಗಿವೆ. 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್'ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರು ಭಾನುವಾರ ಭೇಟಿ ಮಾಡಲಿದ್ದು, ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. 

ಪಕ್ಷ ಇನ್ನೂ ಯಾವುದೇ ಅಂತಿಮ ನಿರ್ಧಾರಗಳನ್ನು ಕೈಗೊಂಡಿಲ್ಲ. ಭಾನುವಾರ ಉಭಯ ನಾಯಕರು ಬೇಟಿ ಮಾಡಲಿದ್ದು, ಭೇಟಿ ಬಳಿಕವಷ್ಟೇ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಕಾಂಗ್ರೆಸ್ ಒಂಟಿಯಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನ.17 ರಂದು ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಭೇಟಿ ಮಾಡಲಿದ್ದು, ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂಬುದರ ಬಗ್ಗೆ ಇಬ್ಬರೂ ನಾಯಕರು ಕುಳಿತು ಚರ್ಚಿಸುತ್ತಾರೆ. ನಂತರ ನಿರ್ಧಾರ ಕೈಗೊಳ್ಳುತ್ತಾರೆಂದು ತಿಳಿಸಿದ್ದಾರೆ. 

ಸರ್ಕಾರ ನಡೆಸಲು ಮೂರೂ ಪಕ್ಷಗಳು ಬಹುತೇಕವಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿ ರೂಪಿಸುವುದರಲ್ಲಿ ಯಶಸ್ವಿಯಾಗಿರುವ ಬೆನ್ನಲ್ಲೇ ಎನ್'ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಈ 3 ಮೈತ್ರಿ ಪಕ್ಷಗಳ ಸರ್ಕಾರ 5 ವರ್ಷ ಪೂರೈಸಲಿದೆ ಎಂದು ಹೇಳಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು, ಶಿವಸೇನೆಯ ನೇತೃತ್ವದಲ್ಲಿಯೇ ಸರ್ಕಾರ ರಚನೆಯಾಗಲಿದೆ. 25 ವರ್ಷ ಕಾಲ ಶಿವಸೇನೆಯು ಮಹಾರಾಷ್ಟ್ರ ಆಳಲಿದೆ. ಸಾಮಾನ್ಯ ಕಾರ್ಯಸೂಚಿಯನ್ನು 3 ಪಕ್ಷಗಳು ಸಿದ್ಧಪಡಿಸುತ್ತಿವೆ ಎಂದು ತಿಳಿಸಿದ್ದಾರೆ. 

ವಿಭಿನ್ನ ವಿಚಾರಧಾರೆ ಹೊಂದಿರುವ ಈ ಮೂರೂ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಬೇಕಿರುವ ಕಾರಣ ಸಾಮಾನ್ಯ ಕಾರ್ಯಸೂಚಿ ಅಗತ್ಯವಾಗಿದೆ. ಈ ಕಾರಣ, ಮೂರೂ ಪಕ್ಷಗಳು ಸೇರಿ ಈ ಕಾರ್ಯಸೂಚಿ ಸಿದ್ಧಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ರೈತರಿಗೆ ಸಮಸ್ಯೆಗಳಿಗೆ ಪರಿಹಾರ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ-ಇತ್ಯಾದಿ ಕಾರ್ಯಸೂಚಿಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಇನ್ನು ಸರ್ಕಾರಕ್ಕೆ ಶಿವಸೇನೆಯದೇ ನೇತೃತ್ವವಿರಲಿದೆ ಎಂಬ ಒಡಂಬಡಿಕೆಗೂ ಬರಲಾಗಿದೆ ಎಂದು ಮೂಲಗಳು ಹೇಳಿವೆ. 

ಈ ಸಾಮಾನ್ಯ ಕಾರ್ಯಸೂಚಿಯ ಕರಡನ್ನು ನ.17 ರಂದು ಪವಾರ್ ಅವರು ದೆಹಲಿಗೆ ಕೊಂಡೊಯ್ಯಲಿದ್ದಾರೆ. ಅಲ್ಲಿ ಸೋನಿಯಾಗಾಂಧಿ ಅವರ ಜೊತೆ ಈ ಬಗ್ಗೆ ಚರ್ಚಿಸಲಿದ್ದಾರೆ. ಸೋನಿಯಾ ಇದಕ್ಕೆ ಒಪ್ಪಿಗೆ ನೀಡಿದ ನಂತರ ಮೈತ್ರಿಯ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ. ಈ ಬಗ್ಗೆ ನಾಗ್ಪುರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಪವಾರ್ ಅವರು, ರಾಜ್ಯದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ 5 ವರ್ಷ ಆಡಳಿತ ನಡೆಸಲಿವೆ. ಮಧ್ಯಂತರ ಚುನಾವಣೆ ಆಗುವುದಿಲ್ಲ. ಅಭಿವೃದ್ಧಿ ಪ್ರಣೀತ ಆಡಳಿತ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com