ಪಾಕ್ ಪ್ರಾಯೋಜಿತ ಉಗ್ರರಿಂದ ನಾಗರೀಕರ ಹತ್ಯೆ: ಜಮ್ಮು-ಕಾಶ್ಮೀರ ಡಿಜಿಪಿ

ಗಡಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಾಗರೀಕರನ್ನು ಹತ್ಯೆ ಮಾಡುತ್ತಿದ್ದಾರೆಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಗಡಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಾಗರೀಕರನ್ನು ಹತ್ಯೆ ಮಾಡುತ್ತಿದ್ದಾರೆಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಇತರ ರಾಜ್ಯದವರಿಗೂ ಕಣಿವೆ ರಾಜ್ಯದಲ್ಲಿ ಭೂಮಿ ಸಂಪಾದಿಸುವ ಮತ್ತು ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. 

ಕೇಂದ್ರ ಸರ್ಕಾರದ ಈ ನಿರ್ಧಾರ ಇದೀಗ ಉಗ್ರರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಇತರ ರಾಜ್ಯದ ಪ್ರಜೆಗಳನ್ನು ಹುಡುಕುತ್ತಿರುವ ಉಗ್ರರು ಭೀಕರವಾಗಿ ಹತ್ಯೆ ಮಾಡುತ್ತಿದ್ದಾರೆ. 

ಕಳೆದ ಸೋಮವಾರವಷ್ಟೇ ರಾಜಸ್ಥಾನ ಮೂಲದ ಟ್ರಕ್ ಚಾಲಕರೊಬ್ಬರನ್ನು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು. ಬುಧವಾರ ಮತ್ತೆ ಶೋಪಿಯಾನ್ ನಲ್ಲಿಯೇ ಪ್ರತ್ಯೇಕ ಘಟನೆಗಳಲ್ಲಿ ಪಂಬಾಬ್ ಮೂಲದ ಸೇಬು ಹಣ್ಣು ಮಾರಾಟಗಾರ ಮತ್ತು ಛತ್ತೀಸ್ಗಢ ಮೂಲದ ದಿನಗೂಲಿ ಕಾರ್ಮಿಕರ ಮೇಲೆ ಉಗ್ರರು ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. 

ಈ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ಡಿಜಿಪಿ, ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಾಗರೀಕರನ್ನು ಗುರಿಯಾಗಿರಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ. ಗಡಿಯಲ್ಲಿ ನುಸುಳುಕೋರರ ವಿರುದ್ಧ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಗ್ರರಿಗೆ ದಿಟ್ಟ ಉತ್ತರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಉಗ್ರರ ವರ್ತನೆ ಅತ್ಯಂತ ಘೋರ ಹಾಗೂ ಅಮಾನವೀಯವಾದದ್ದು. ನಾಗರೀಕರ ಸಾವು ಸಾಕಷ್ಟು ನೋವು ತಂದಿದೆ. ಮೃತರ ಕುಟುಂಬಸ್ಥರ ಕುರಿತು ಸಂತಾಪ ಸೂಚಿಸುತ್ತೇವೆ. ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ಕಣಿವೆಯಲ್ಲಿರುವ ಜನರಿಗೆ ಸಹಾಯ ಮಾಡಲು ಇತರೆ ರಾಜ್ಯಗಳಿಂದ ಜನರು ಕಾಶ್ಮೀರಕ್ಕೆ ಬರುತ್ತಿದ್ದಾರೆ. ಇಂತಹ ಘೋರ ಕೃತ್ಯಗಳನ್ನು ಸ್ಥಳೀಯರು ಖಂಡಿಸುತ್ತಿದ್ದು, ಪೊಲೀಸರೊಂದಿಗೆ ಸಹಕಾರ ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಪಾಕಿಸ್ತಾನ ಅದನ್ನು ಹಾಳು ಮಾಡಲು ಯತ್ನಿಸುತ್ತಿದೆ. ಗಡಿ ಮೂಲಕ ಉಗ್ರರನ್ನು ನುಸುಳಿಸಿ, ಸಮಸ್ಯೆಗಳನ್ನು ಸೃಷ್ಟಿಸಿ ಶಾಂತಿ ಹಾಳು ಮಾಡುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com