ಐಟಿ ದಾಳಿಯ ನಂತರ ನಾನು ಮತ್ತಷ್ಟು ಪ್ರಭಾವಿಯಾಗಿದ್ದೇನೆ: ಕಲ್ಕಿ ಭಗವಾನ್

ಆದಾಯ ತೆರಿಗೆ ಇಲಾಖೆ ದಾಳಿಯ ನಂತರ ನಾಪತ್ತೆಯಾಗಿದ್ದ ಕಲ್ಕಿ ಆಶ್ರಮದ ಸಂಸ್ಥಾಪಕ ವಿಜಯ್ ಕುಮಾರ್ ನಾಯ್ಡು ಅಲಿಯಾಸ್ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಿ ನಾಯ್ಡು ಕೊನೆಗೂ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದು....
ಕಲ್ಕಿ ಭಗವಾನ್
ಕಲ್ಕಿ ಭಗವಾನ್

ಚಿತ್ತೂರು: ಆದಾಯ ತೆರಿಗೆ ಇಲಾಖೆ ದಾಳಿಯ ನಂತರ ನಾಪತ್ತೆಯಾಗಿದ್ದ ಕಲ್ಕಿ ಆಶ್ರಮದ ಸಂಸ್ಥಾಪಕ ವಿಜಯ್ ಕುಮಾರ್ ನಾಯ್ಡು ಅಲಿಯಾಸ್ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಿ ನಾಯ್ಡು ಕೊನೆಗೂ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದು, ಐಟಿ ದಾಳಿಯ ನಂತರ ತಾನು ಮತ್ತಷ್ಟು ಪ್ರಭಾವಿಯಾಗಿರುವುದಾಗಿ ಸ್ವಯಂ ಘೋಷಿತ ದೇವಮಾನವ ಹೇಳಿಕೊಂಡಿದ್ದಾರೆ.

ಆದಾಯ ತೆರಿಗೆ  ದಾಳಿಯ ಹಿನ್ನೆಲೆಯಲ್ಲಿ,  ತಮಿಳುನಾಡಿನ ನೇಮಮ್ ಆಶ್ರಮದಲ್ಲಿ ಅವರು ಲಭ್ಯವಿದ್ದಾರೆ ಎಂದು ಕಲ್ಕಿ ಆಶ್ರಮ  ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದೆ.  

ನಮ್ಮ  ಆರೋಗ್ಯ ಚೆನ್ನಾಗಿದೆ. ನಮ್ಮ ಬಗ್ಗೆ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ವಿಡಿಯೋದಲ್ಲಿ ವಿಜಯ್ ಕುಮಾರ್ ನಾಯ್ಡು  ದಂಪತಿ ಹೇಳಿದ್ದಾರೆ. ತಾವು ದೇಶ ಬಿಟ್ಟು ಪರಾರಿಯಾಗಿರುವುದಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಆದರೆ, ತಾವು  ದೇಶವನ್ನು ತೊರೆದಿಲ್ಲ, ತೊರೆಯುವುದೂ ಇಲ್ಲ, ಈ ವದಂತಿಗಳನ್ನು ಯಾರೂ ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಕಲ್ಕಿ ಆಶ್ರಮದ ಪ್ರಧಾನ ಕಾರ್ಯಾಲಯದಲ್ಲಿ  ಎಂದಿನಂತೆ  ಕಾರ್ಯಕ್ರಮಗಳು ಜರುಗುತ್ತಿವೆ ಎಂದು ಅವರು ಹೇಳಿದ್ದಾರೆ.

ಭಕ್ತಿಯ ಹೆಸರಿನಲ್ಲಿ ಬೃಹತ್  ಪ್ರಮಾಣದ ಸಂಪತ್ತು ಕ್ರೋಡಿಕರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕಲ್ಕಿ ಆಶ್ರಮಗಳ ಮೇಲೆ  ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ಹಾಗೂ ಶೋಧನೆಯ ವೇಳೆ ಹಲವು ಸಂಗತಿಗಳು ಹೊರಬಿದ್ದಿದ್ದವು. ನಿತ್ಯ ವಿವಾದಗಳ ಕೇಂದ್ರವಾಗಿರುವ ಕಲ್ಕಿ ಆಶ್ರಮದಲ್ಲಿ ನಡೆದ ಆದಾಯ ತೆರಿಗೆ ಶೋಧನೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜೊತೆಗೆ ಹೈದರಾಬಾದ್‌ನಲ್ಲಿರುವ ಕಲ್ಕಿ ಆಶ್ರಮ, ಕಚೇರಿ ಹಾಗೂ ಕಟ್ಟಡಗಳ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಬೃಹತ್ ಪ್ರಮಾಣದ ಚಿನ್ನದ ಬಿಸ್ಕತ್ತು, ವಜ್ರಗಳು, ಆಸ್ತಿ ಹಾಗೂ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ.

ದೇಶ ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಕಲ್ಕಿ ಭಗವಾನ್‌ಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದ್ದು, ಭಗವಾನ್ ಪುತ್ರ ಕೃಷ್ಣಾ ಮತ್ತು ಪತ್ನಿಯನ್ನು ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದರು. ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ ಹಲವು ಅವ್ಯವಹಾರ ನಡೆದಿದ್ದ ಆರೋಪ ಕೇಳಿಬಂದಿದ್ದವು. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಗಳು, ಬೆನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಲಾಗಿದೆ ಎನ್ನುವ ಆರೋಪ  ಕೇಳಿ ಬಂದಿದ್ದವು.

ಎಲ್‌ಐಸಿಯಲ್ಲಿ ದ್ವಿತೀಯ ದರ್ಜೆ  ಕ್ಲರ್ಕ್ ಆಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‌ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‌ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಕಾಣಿಸಿಕೊಂಡು ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ. ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ.  ಕೊಡಬೇಕಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com