Source : Online Desk
ಚಂಡೀಘಡ: ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಉಲ್ಟಾಹೊಡೆದಿದ್ದು, ಬಿಜೆಪಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ಮೈತ್ರಿಕೂಟ ತೀವ್ರ ಸ್ಪರ್ಧೆ ನೀಡುತ್ತಿದೆ.
ಒಟ್ಟು 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ, ಪ್ರಸ್ತುತ ಲಭ್ಯವಿರುವ ಫಲಿತಾಂಶಗಳ ಅನ್ವಯ ಬಿಜೆಪಿ ಮೈತ್ರಿಕೂಟ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಹರ್ಯಾಣದಲ್ಲಿ ಇತರೆ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದ್ದು, ಒಟ್ಟು 20 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.
ಇನ್ನು ಹರ್ಯಾಣದಲ್ಲಿ ದುಷ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಾರ್ಟಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದ್ದು, ಅವರ ಪಕ್ಷ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಹರ್ಯಾಣದಲ್ಲಿ ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 46 ಆಗಿದ್ದು, ಬಿಜೆಪಿ ಮೈತ್ರಿಕೂಟಕ್ಕೆ ಜೆಜೆಪಿ ಬೆಂಬಲ ನೀಡಿದರೆ ಸರ್ಕಾರ ರಚನೆ ಸಲೀಸಾಗಲಿದೆ. ಒಂದು ವೇಳೆ ಜೆಜೆಪಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ನೀಡಿದರೆ, ಆಗ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ 4 ಸ್ಥಾನಗಳ ಕೊರತೆ ಎದುರಾಗಲಿದೆ.