ಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ, 20 ಸಾವು, 50 ಜನರಿಗೆ ಗಾಯ

ಮಹಾರಾಷ್ಟ್ರದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ
ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ

ಮುಂಬೈ: ಮಹಾರಾಷ್ಟ್ರದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

ಮಹಾರಾಷ್ಟ್ರದ ಶಿರ್‌ಪುರದ ವಾಘಾಡಿ ಗ್ರಾಮದಲ್ಲಿ ಶನಿವಾರ ರಾಸಾಯನಿಕ ಕಾರ್ಖಾನೆಯಲ್ಲಿ ಈ ಬೃಹತ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದು, ಕಾರ್ಖಾನೆಯೊಳಗೆ ಇನ್ನೂ ಎಪ್ಪತ್ತುಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ನಿಯೋಜಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಶಿರ್ಪುರದ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಸಾಯನಿಕ ಕಂಪನಿ ಕಾಂಪೌಂಡ್ ಒಳಗೆ ಸ್ಫೋಟ ಸಂಭವಿಸಿದೆ. ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಕೂಡ ಕಂಪನ ಉಂಟಾಗಿದೆ. ಕಪ್ಪು ಹೊಗೆಯ ಧೂಳು ಇಡೀ ಪ್ರದೇಶವನ್ನು ಆವರಿಸಿದ್ದು,  ಜನರನ್ನು ಸಾಗಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇನ್ನು ಎಂಐಡಿಸಿಯ ಆವರಣವು ನಗರದಿಂದ ದೂರವಿರುವುದರಿಂದ, ಹಲವಾರು ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಕಂಪನಿಯ ಆವರಣದಲ್ಲಿ ವಾಸಿಸುತ್ತಾರೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಅನ್ವಯ ಈ ಸ್ಫೋಟದ ಸಮಯದಲ್ಲಿ ಸುಮಾರು 100 ಕಾರ್ಮಿಕರು ಕಾರ್ಖಾನೆಯೊಳಗೆ ಇದ್ದರು ಎನ್ನಲಾಗಿದೆ.. ಗಾಯಗೊಂಡವರಲ್ಲಿ ಕಾರ್ಖಾನೆ ಕಾಂಪೌಂಡ್‌ನಲ್ಲಿ ವಾಸಿಸುವ ಹಲವಾರು ಅಪ್ರಾಪ್ತ ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. 

ಈಗ ಗಾಯಾಳುಗಳನ್ನು ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಈ ಪ್ರದೇಶದ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com