ಕಣಿವೆ ರಾಜ್ಯದಲ್ಲಿ 8 ಲಷ್ಕರ್ ಉಗ್ರರ ಬಂಧನ: ಕಾಶ್ಮೀರ ಪೊಲೀಸರ ಮಾಹಿತಿ

ಮಹತ್ವದ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತೀಯ ಸೇನಾ ಪಡೆಗಳ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನದಿಂದ ಬಂದಿರುವ ಉಗ್ರರು ಎಂಬ ಶಂಕೆ

ಶ್ರೀನಗರ: ಮಹತ್ವದ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಭಾರತದ ವಿರುದ್ಧ ಪದೇ ಪದೇ ಪಾಕಿಸ್ತಾನ ಕಾಲು ಕೆರೆಯುತ್ತಿದ್ದು, ಇದೀಗ ತನ್ನ ಸೇನೆ, ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಪಾಕ್ ಕೃಪಾಪೋಷಿತ ಉಗ್ರರನ್ನು ಭಾರತದ ಮೇಲೆ ಛೂ ಬಿಟ್ಟಿದ್ದು, ಭಾರತದಲ್ಲಿ ವಿಧ್ವಂಸಕ ದಾಳಿ ಮಾಡಲು ಸಂಚು ರೂಪಿಸಿದ್ದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಉಗ್ರರು ಕಣಿವೆ ರಾಜ್ಯದ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟು ತೆರೆಯದಂತೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ವಾಣಿಜ್ಯ ಸಂಕೀರ್ಣಗಳು ಮುಚ್ಚಿಯೇ ಇರಬೇಕೆಂದು ಕರಪತ್ರಗಳನ್ನೂ ಹಂಚುತ್ತಿದ್ದರು. ಕಳೆದ ವಾರ ಮನೆಯೊಂದರ ಮೇಲೆ ನಡೆದ ದಾಳಿಯ ಹಿಂದೆ ಈ ಉಗ್ರರದ್ದೇ ಕೈವಾಡವಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಈಗ್ಗೆ ಒಂದು ವಾರದ ಹಿಂದಷ್ಟೇ ಭಾರತೀಯ ಸೇನೆ ಎಲ್ ಒಸಿ ಗಡಿಯಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಉಗ್ರರನ್ನು ಬಂಧಿಸಿತ್ತು. ಈ ವೇಳೆ ಬಂಧಿತ ಉಗ್ರರು ತಾವು ಪಾಕಿಸ್ತಾನ ಮೂಲದವರಾಗಿದ್ದು, ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ಇಲಾಖೆ ಐಎಸ್ಐ ತಮಗೆ ತರಬೇತಿ ನೀಡಿ ಭಾರತದಲ್ಲಿ ದಾಳಿ ಮಾಡುವಂತೆ ಕಳುಹಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದರು. ಇದಾದ ಒಂದೇ ವಾರದ ಅಂತರದಲ್ಲಿ ಮತ್ತೆ 8 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com