ಸರ್ಕಾರದಿಂದ ಸಿಎಂ, ಸಚಿವರ ಆದಾಯ ತೆರಿಗೆ ಪಾವತಿಗೆ ಅಂತ್ಯ, 4 ದಶಕಗಳ ನಿಯಮ ರದ್ದುಗೊಳಿಸಿದ ಯೋಗಿ

ಕಳೆದ ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರ ಆದಾಯ ತೆರಿಗೆಯನ್ನು ಸರ್ಕಾರದ ಬೊಕ್ಕಸದಿಂದಲೇ ಪಾವತಿಸುತ್ತಿದ್ದ ನಿಯಮಕ್ಕೆ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಅಂತ್ಯ ಹಾಡಿದೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಕಳೆದ ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರ ಆದಾಯ ತೆರಿಗೆಯನ್ನು ಸರ್ಕಾರದ ಬೊಕ್ಕಸದಿಂದಲೇ ಪಾವತಿಸುತ್ತಿದ್ದ ನಿಯಮಕ್ಕೆ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಅಂತ್ಯ ಹಾಡಿದೆ.

ಮುಖ್ಯಮಂತ್ರಿ ಮತ್ತು ಸಚಿವರು ಬಡತನದಿಂದ ಬಂದವರು ಎಂದು ಪರಿಗಣಿಸಿ ಅವರ ಆದಾಯ ತೆರಿಗೆಯನ್ನು ಸರ್ಕಾರವೇ ಪಾವತಿಸುವ ನಿಯಮವನ್ನು 1981ರಲ್ಲಿ ಜಾರಿಗೆ ತರಲಾಗಿತ್ತು. ಆದರೆ ಮುಖ್ಯಮಂತ್ರಿ ಮತ್ತು ಸಚಿವರ ವೇತನ ಹಾಗೂ ಭತ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾದ ನಂತರವೂ ಅದು ಮುಂದುವರೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ವರದಿ ಪ್ರಕಟಗೊಂಡ ಬಳಿಕ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಯೋಗಿ ಆದಿತ್ಯನಾಥ್ ಸರ್ಕಾರ ಈ ನಿಯಮವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ.

ಇನ್ನು ಮುಂದೆ ಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸಬೇಕು ಎಂದು ಹಣಕಾಸು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ವಿ.ಪಿ. ಸಿಂಗ್​ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಪ್ರದೇಶ ಸಚಿವರ ವೇತನ, ಭತ್ಯೆ ಮತ್ತು ಇತರೆ ಕಾಯ್ದೆ, 1981 ಅನ್ನು ಜಾರಿಗೊಳಿಸಿದ್ದರು. ಈ ಕಾಯ್ದೆಯ ಪ್ರಕಾರ ಉತ್ತರ ಪ್ರದೇಶದ ಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರೆಲ್ಲರ ಆದಾಯ ತೆರಿಗೆಯನ್ನು ರಾಜ್ಯ ಖಜಾನೆಯಿಂದಲೇ ಭರಿಸಬೇಕಾಗಿದೆ.

ಈ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಚಿವ ಹಾಗೂ ರಾಜ್ಯ ಸಚಿವ ಪದವಿ ಅಲಂಕರಿಸುವವರು ತಿಂಗಳಿಗೆ 1 ಸಾವಿರ ರೂ. ವೇತನ ಪಡೆಯಬೇಕು. ಡೆಪ್ಯುಟಿ ಮಿನಿಸ್ಟರ್​ ಆದವರು ಮಾಸಿಕ 650 ರೂ. ಸಂಬಳ ಪಡೆಯಬೇಕು. ಉಪಪರಿಚ್ಛೇದ (1) ಮತ್ತು (2)ರಲ್ಲಿ ಪ್ರಸ್ತಾಪಿಸಲಾಗಿರುವ ವೇತನವು, ಇನ್ನಾವುದೇ ಮೂಲಗಳಿಂದ ಪಡೆಯುವ ವೇತನ ಮತ್ತು ಅದಕ್ಕೆ ಆದಾಯ ತೆರಿಗೆ ಕಾಯ್ದೆಯನ್ವಯ ಪಾವತಿಸಬೇಕಾದ ಆದಾಯ ತೆರಿಗೆ ಹೊರತಾಗಿರುತ್ತದೆ, ಹಾಗೂ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಈ ಕಾಯ್ದೆ ಜಾರಿಯಾದ ನಂತರದಲ್ಲಿ ಉತ್ತರ ಪ್ರದೇಶದಲ್ಲಿ ಇದುವರೆಗೆ ಮುಲಾಯಂ ಸಿಂಗ್​ ಯಾದವ್​, ಅಖಿಲೇಶ್​ ಯಾದವ್​ (ಸಮಾಜವಾದಿ ಪಕ್ಷ), ಮಾಯಾವತಿ (ಬಿಎಸ್​ಪಿ), ಕಲ್ಯಾಣ್​ ಸಿಂಗ್​, ರಾಜನಾಥ್​ ಸಿಂಗ್​ (ಬಿಜೆಪಿ) ಹಾಗೂ ನಾರಾಯಣದತ್ತ ತಿವಾರಿ (ಕಾಂಗ್ರೆಸ್​) ಸೇರಿ ಹಾಲಿ ಸಿಎಂ ಯೋಗಿ ಆದಿತ್ಯನಾಥವರೆಗೆ 19 ಮಂದಿ ಸಿಎಂಗಳಾಗಿದ್ದಾರೆ. ಅಂದಾಜು 1 ಸಾವಿರಕ್ಕೂ ಹೆಚ್ಚು ಮಂದಿ ಸಚಿವರು ಆಗಿದ್ದಾರೆ. 1981ರ ಕಾಯ್ದೆಯನ್ವಯ ಇವರೆಲ್ಲರ ಆದಾಯ ತೆರಿಗೆಯನ್ನು ರಾಜ್ಯದ ಖಜಾನೆಯಿಂದ ಭರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com