ಪುಲ್ವಾಮ ದಾಳಿಯಂತಹ ಘಟನೆಗಳು ಮಾತ್ರ ಜನರ ಮನಸ್ಥಿತಿ ಬದಲಿಸಬಹುದು: ಶರದ್ ಪವಾರ್ ವಿವಾದಾತ್ಮಕ ಹೇಳಿಕೆ

ಮಹಾರಾಷ್ಟ್ರ ಜನತೆ ಹಾಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದು, ಪುಲ್ವಾಮ ದಾಳಿಯಂತಹ ಘಟನೆಗಳು ಮಾತ್ರ ಜನರ ಮನಸ್ಥಿತಿ ಬದಲಿಸಬಹುದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಎನ್ ಸಿಪಿ ಮುಖ್ಯಸ್ಥರ ಹೇಳಿಕೆ, ವ್ಯಾಪಕ ವಿರೋಧ

ಔರಂಗಾಬಾದ್: ಮಹಾರಾಷ್ಟ್ರ ಜನತೆ ಹಾಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದು, ಪುಲ್ವಾಮ ದಾಳಿಯಂತಹ ಘಟನೆಗಳು ಮಾತ್ರ ಜನರ ಮನಸ್ಥಿತಿ ಬದಲಿಸಬಹುದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇಂದು ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟ ಮಾಡಲಿದೆ. ಇದರ ಬೆನ್ನಲ್ಲೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿವಾದಾತ್ಮಕ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 

ಔರಂಗಾಬಾದ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಶರದ್ ಪವಾರ್, ಮಹಾರಾಷ್ಟ್ರದಲ್ಲಿ ಜನ ಹಾಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ. ಈಗ ಚುನಾವಣೆಯಾದರೆ ಬಿಜೆಪಿ ಮತ್ತು ಶಿವಸೇನೆ ಸೋಲು ಖಚಿತ. ಇಂತಹ ಸಂದರ್ಭದಲ್ಲಿ ಪುಲ್ವಾಮಾ ದಾಳಿಯಂತಹ ಘಟನೆಗಳು ಮಾತ್ರ ಬಿಜೆಪಿಯನ್ನು ರಕ್ಷಿಸಬಲ್ಲವು ಎಂದು ಹೇಳಿದ್ದಾರೆ.

ಅಲ್ಲದೆ ಈ ಹಿಂದೆ ನಡೆದ ಪುಲ್ವಾಮ ದಾಳಿ, ಬಾಲಾಕೋಟ್ ವಾಯುದಾಳಿಯನ್ನು ಪೂರ್ವ ನಿಯೋಜಿತ ಎಂದು ಕರೆದ ಶರದ್ ಪವಾರ್, ಲೋಕಸಭೆ ಚುನಾವಣೆಗೂ ಮೊದಲು ಇಡೀ ದೇಶ ಮೋದಿ ದುರಾಡಳತಕ್ಕೆ ಆಕ್ರೋಶಗೊಂಡಿತ್ತು. ಆದರೆ ಆಗ ಸಿಆರ್ ಪಿಎಫ್ ಯೋಧರ ಮೇಲೆ ಪುಲ್ವಾಮದಲ್ಲಿ ದಾಳಿಯಾಯಿತು. ಈ ದಾಳಿಯಾಗುತ್ತಲೇ ಜನರ ಮನಸ್ಥಿತಿಯೇ ಬದಲಾಗಿ ಹೋಯಿತು. ಆ ದಾಳಿಯ ಲಾಭವನ್ನು ಬಿಜೆಪಿ ರಾಜಕೀಯವಾಗಿ ಬಳಿಸಿಕೊಂಡಿತು. ನಾನು ಕೂಡ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನನಗೂ ರಕ್ಷಣಾ ಇಲಾಖೆಯಲ್ಲಿ ಸಾಕಷ್ಟು ಸಂಪರ್ಕಗಳಿವೆ. ನನಗೆ ತಿಳಿದ ಮಾಹಿತಿ ಅನ್ವಯ ಪುಲ್ವಾಮ ಉಗ್ರದಾಳಿ ಪೂರ್ವ ನಿಯೋಜಿತ ಮತ್ತು ಅದರಲ್ಲಿ ಪಾಕಿಸ್ತಾನದ ಕೈವಾಡವಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಂತೆಯೇ ಬಾಲಾಕೋಟ್ ವಾಯುದಾಳಿ ಮೋದಿ ಜನಪ್ರಿಯತೆಯನ್ನು ಹೆಚ್ಚಿಸಿತು. ಇಂತಹ ಕಾರ್ಯ ಮೋದಿಗೆ ಕರಗತವಾಗಿದೆ. ಕೆಲಸ ಮಾಡದಿದ್ದರೂ ಕೆಲಸ ಮಾಡಿದಂತೆ ಮೋದಿ ಪೋಸ್ ನೀಡಿ ಜನಪ್ರಿಯತೆ ಗಳಿಸುತ್ತಾರೆ. ಆದರೆ ಈ ತಂತ್ರಗಾರಿಕೆ ಮಹಾರಾಷ್ಟ್ರದಲ್ಲಿ ನಡೆಯಲಾರದು. ಹಾಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ದುರಾಡಳಿತ ಜನರನ್ನು ಹೈರಾಣಾಗಿಸಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಅವರ ಮನಸ್ಥಿತಿ ಬದಲಾಗಬೇಕು ಎಂದರೆ ಮತ್ತೊಂದು ಪುಲ್ವಾಮ ದಾಳಿ ಅಥವಾ ಬಾಲಾಕೋಟ್ ವಾಯುದಾಳಿಯಂತ ಘಟನೆಯಾಗಬೇಕು. ಇಲ್ಲವಾದಲ್ಲಿ ಈ ಸರ್ಕಾರ ಉರುಳುವುದು ಖಚಿತ ಎಂದು ಪವಾರ್ ಹೇಳಿದ್ದಾರೆ.

ಇನ್ನು ಶರದ್ ಪವಾರ್ ಅವರ ಈ ಹೇಳಿಕೆ ಬಿಜೆಪಿ ಮತ್ತು ಶಿವಸೇನೆ ತೀವ್ರಕಿಡಿಕಾರಿವೆ. 288 ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಯಲಿದ್ದು, ಇಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com