ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ, ನಮ್ಮ ನೌಕಾಪಡೆಯ ಸಾಮರ್ಥ್ಯ ವೃದ್ಧಿಸುತ್ತಿದೆ: ರಾಜನಾಥ್ ಸಿಂಗ್

ಐಎನ್ಎಸ್ ಖಂಡೇರಿ ಸೇರ್ಪಡೆ ಮೂಲಕ ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಐಎನ್ಎಸ್ ಖಂಡೇರಿ ಸೇನೆಗೆ ಸೇರಿಸಿದ ರಾಜನಾಥ್ ಸಿಂಗ್
ಐಎನ್ಎಸ್ ಖಂಡೇರಿ ಸೇನೆಗೆ ಸೇರಿಸಿದ ರಾಜನಾಥ್ ಸಿಂಗ್

ಮುಂಬೈ: ಐಎನ್ಎಸ್ ಖಂಡೇರಿ ಸೇರ್ಪಡೆ ಮೂಲಕ ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಐಎನ್ಎಸ್ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್,  ಐಎನ್ಎಸ್ ಖಂಡೇರಿ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಸದಾ ಯುದ್ಧದ ಮಾತನಾಡುವ ಪಾಕಿಸ್ತಾನ ಈ ಮೂಲಕ ತಿಳಿಯಬೇಕಾದ ವಿಚಾರವೆಂದರೆ, ಈಗ ಭಾರತ ಬದಲಾಗಿದ್ದು, ಇದು ನವಭಾರತ. ಸೇನೆಯ ಬಲವರ್ಧನೆಯಾಗಿದೆ. ನಮ್ಮ ಸರ್ಕಾರ ಸೇನಾ ಬಲವರ್ಧನೆಗೆ ಸಾಕಷ್ಟು ಒತ್ತು ನೀಡಿದೆ. ರಾಫೆಲ್ ಒಪ್ಪಂದ, ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ.  ಹೀಗಾಗಿ ಶತ್ರುರಾಷ್ಟ್ರಗಳ ಯಾವುದೇ ಬೆದರಿಕೆಗಳಿಗೆ ಬಲವಾದ ತಿರುಗೇಟು ನೀಡುತ್ತೇವೆ ಎಂದು ಹೇಳಿದರು.

ಅಂತೆಯೇ ಐಎನ್ಎಸ್ ಖಂಡೇರಿಯನ್ನು ತಾವು ಸೇನೆಗೆ ಸೇರ್ಪಡೆ ಮಾಡುತ್ತಿರುವುದು ಅತ್ಯಂತ ಗೌರವ ಎಂದು ಭಾವಿಸುತ್ತೇನೆ ಎಂದು ಹೇಳಿದ ರಾಜನಾಥ್ ಸಿಂಗ್ ಅವರು, ಖಂಡೇರಿ ಎನ್ನುವುದು ಸಮುದ್ರದ ಬಲಿಷ್ಠ ಮೀನಿನ ಹೆಸರು. ಸಮುದ್ರದಾಳದಲ್ಲಿರುವ ತನ್ನ ಬೇಟೆಯನ್ನು ಕ್ಷಣ ಮಾತ್ರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಮೂಲಕ ಛಿದ್ರ ಮಾಡುತ್ತದೆ. ಆ ಬಲಿಷ್ಠ ಮೀನಿನಂತೆಯೇ ಐಎನ್ಎಸ್ ಖಂಡೇರಿ ಸಮುದ್ರಾದಳದಲ್ಲಿ ಭಾರತದ ರಕ್ಷಣೆ ಮಾಡಲಿದೆ ಎಂದು ಹೇಳಿದರು.

ಇನ್ನು ಭಾರತ ಫ್ರಾನ್ಸ್‌ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿ 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಖಂಡೇರಿ ಜಲಾಂತರ್ಗಾಮಿ ಕೂಡ ಒಂದು. ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ. ಒಟ್ಟು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ದೇಶದ ಮೊದಲ ಸ್ಕಾರ್ಪೀನ್ ದರ್ಜೆಯ ಐಎನ್‌ಎಸ್‌ ಕಲ್ವರಿ 2017ರಲ್ಲಿ ನೌಕಾಪಡೆ ಸೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com