ಸರ್ಜಿಕಲ್ ಸ್ಟ್ರೈಕ್ ದಿನ ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ: ಪ್ರಧಾನಿ ಮೋದಿ

ಪಾಕಿಸ್ತಾನದ ಪಿಒಕೆಯಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ದಾಳಿ ವೇಳೆ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ ಎಂದು ಪ್ರಧಾನ ಮೋದಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನದ ಪಿಒಕೆಯಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ದಾಳಿ ವೇಳೆ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ ಎಂದು ಪ್ರಧಾನ ಮೋದಿ ಹೇಳಿದ್ದಾರೆ.

2016ರಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಇಂದಿಗೆ ಮೂರು ವರ್ಷ ತುಂಬಿದ್ದು, ಈ ರೋಚಕ ಕ್ಷಣಗಳನ್ನು ನೆನಪಿಸಿಕೊಂಡಿರುವ ಪ್ರಧಾನಿ ಮೋದಿ ಆ ಕ್ಷಣಗಳ ಮೆಲುಕು ಹಾಕಿದ್ದಾರೆ. 2016 ಸೆಪ್ಟೆಂಬರ್ 28ರ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಪಾಲಂ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಸೇನೆಯ 17 ಮಂದಿ ಸೈನಿಕರು ಭಾರತ ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ 7 ಲಾಂಚ್ ಪ್ಯಾಡ್ ಗಳ ಮೇಲೆ ದಾಳಿ ಮಾಡಿದ್ದರು. ಭಾರತೀಯ ಸೈನಿಕರ ಆ ಶೌರ್ಯವನ್ನು ಇಡೀ ದೇಶ ಮರೆಯುವುದಿಲ್ಲ. ಭಾರತೀಯ ಸೇನೆಯ ಶೌರ್ಯವನ್ನು ಇಡೀ ವಿಶ್ವಕ್ಕೇ ಸಾರಿದ ದಿನ ಅದು. ಸರ್ಜಿಕಲ್ ಸ್ಚ್ರೈಕ್ ಮೂಲಕ ಇಡೀ ದೇಶ ಸೇನೆಯ ಕುರಿತು ಹೆಮ್ಮೆ ಪಡುವಂತೆ ಮಾಡಿದರು. ಅಲ್ಲದೆ ಉಗ್ರರನ್ನು ಪ್ರಚೋದಿಸಿ ಭಾರತದ ಮೇಲೆ ದಾಳಿ ಮಾಡಲು ಪ್ರೇರಿಪಿಸುತ್ತಿದ್ದ ಪಾಕಿಸ್ತಾನಕ್ಕೆ ಸೈನಿಕರು ಮರ್ಮಾಘಾತ ನೀಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಂತೆಯೇ ಆ ದಿನ ನಾನು ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ. ಸೈನಿಕರ ಸುರಕ್ಷಿತ ವಾಪಸಾತಿಗಾಗಿ ನಮ್ಮ ತಂಡ ಕಾಯುತ್ತಿತ್ತು. ಸೈನಿಕರನ್ನು ಹೊತ್ತ ಧ್ರುವ ಹೆಲಿಕಾಪ್ಟರ್ ಸುರಕ್ಷಿತ ವಾಪಸ್ ಆದಾಗ ಖುಷಿಯಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನು 2016 ಸೆಪ್ಟೆಂಬರ್ 28ರಂದು ಭಾರತೀಯ ಸೇನೆಯ 17 ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿದ್ದರು. ಸುಮಾರು 500 ಮೀ ನಿಂದ 5 ಕಿ.ಮೀ ದೂರದಲ್ಲಿದ್ದ ಉಗ್ರರ 7 ಲಾಂಚ್ ಪ್ಯಾಡ್ ಗಳ ಮೇಲೆ ಸೈನಿಕರು ದಾಳಿ ನಡೆಸಿದ್ದರು. ಇವಿಷ್ಟೂ ಕಾರ್ಯಾಚರಣೆಯನ್ನು ಅಂದಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್, ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಅಂದಿನ ಸೇನಾ ಮುಖ್ಯಸ್ಥ ದಲ್ ಬೀರ್ ಸಿಂಗ್ ಅವರು ವೀಕ್ಷಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com