ಮುಂಬೈ; ಮಾರಕ ಕೊರೋನಾ ವೈರಸ್ ನಿಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದರೂ ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಮಾತ್ರ ತಮ್ಮ ಹುಟ್ಟುಹಬ್ಬದ ನಿಮಿತ್ತ ಅಪಾರ ಜನಸ್ತೋಮವನ್ನು ಸೇರಿಸಿದ್ದಾರೆ.
ಲಾಕ್ ಡೌನ್ ನಡುವೆಯೂ ಹುಟ್ಟುಹಬ್ಬ ಆಚರಿಸಿಕೊಂಡು ಜನರನ್ನು ಗುಂಪು ಸೇರಿಸಿದ ಆರೋಪದಲ್ಲಿ ಮಹಾರಾಷ್ಟ್ರದ ವಾರ್ದಾ ಕ್ಷೇತ್ರದ ಬಿಜೆಪಿ ಶಾಸಕ ದಾದಾರಾವ್ ಕೆಚೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿನ್ನೆ ಅಂದರೆ ಭಾನುವಾರ ಸುಮಾರು ನೂರಕ್ಕೂ ಹೆಚ್ಚು ಮಂದಿ ಆರ್ವಿಯಲ್ಲಿರುವ ದಾದರಾವ್ ಅವರ ನಿವಾಸದಲ್ಲಿ ನೆರೆದಿದ್ದರು. ಅಲ್ಲದೆ, ಹುಟ್ಟುಹಬ್ಬದ ಪ್ರಯುಕ್ತ ಜನರಿಗೆ ದವಸ ಧಾನ್ಯ ನೀಡುತ್ತಾರೆ ಎಂದು ತಿಳಿದ ಜನರು ಭಾರಿ ಸಂಖ್ಯೆಯಲ್ಲಿ ಇವರ ನಿವಾಸದ ಕಡೆ ಧಾವಿಸಿದ್ದರು. ಆದರೆ, ಅಲ್ಲಿ ಯಾವುದೇ ದವಸ ಧಾನ್ಯ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಈ ಸಂಬಂಧ ವಿಷಯ ತಿಳಿದ ಪೊಲೀಸರು ನಿವಾಸಕ್ಕೆ ಆಗಮಿಸಿ ನೆರೆದಿದ್ದ ಜನರನ್ನು ಚದುರಿಸಿದ್ದಾರೆ. ಈ ವೇಳೆ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಹುಟ್ಟುಹಬ್ಬ ಕಾರ್ಯಕ್ರಮ ಮುಂದುವರೆಸಿದ್ದರು. ಹೀಗಾಗಿ ಶಾಸಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನನ್ನ ತಪ್ಪಿಲ್ಲ, ಇದು ವಿಪಕ್ಷಗಳ ಪಿತೂರಿ: ಜನ ಬರುವುದು ಬೇಡ ಎಂದು ಹೇಳಿದ್ದೆ: ದಾದರಾವ್ ಸ್ಪಷ್ಟನೆ
ಇನ್ನು ಈ ವಿಚಾರ ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಪ್ರಚಾರವಾಗಿ ಬಿಜೆಪಿ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಜನ್ಮ ದಿನಾಚರಣೆ ಸಲುವಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ, ಇನ್ನು ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಾದರಾವ್, ನಾನು ನಾಲ್ಕು ದಿನಗಳ ಹಿಂದೆಯೇ ಜನರಲ್ಲಿ ಬೇಡಿಕೊಂಡಿದ್ದೆ. ನನ್ನ ಮನೆ ಬಳಿ ಬರುವುದು ಬೇಡ, ಹುಟ್ಟುಹಬ್ಬದ ವೇಳೆ ಶುಭ ಹಾರೈಸುವುದು ಬೇಡ ಎಂದು ತಿಳಿಸಿದ್ದೆ. ಯಾರೋ ಕಿಡಿಗೇಡಿಗಳು ನನ್ನ ವಿರುದ್ಧ ಪಿತೂರಿ ನಡೆಸಿ ದವಸ ಧಾನ್ಯ ಕೊಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಯಾರಿಗೂ ಕಾಲ್ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
Advertisement