'ಕ್ಷಮೆ' ಎಂಬ ಪದ ಅಷ್ಟು ಕೆಟ್ಟದಾಗಿದೆಯೇ..; ಸೆ.10ಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್‍ಗೆ ಶಿಕ್ಷೆಯ ಪ್ರಮಾಣ ಘೋಷಣೆ ಮಾಡುವ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ.10ಕ್ಕೆ ಕಾಯ್ದಿರಿಸಿದೆ.
ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿ ಸದಸ್ಯ ಪೀಠ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಂಗದ ವಿರುದ್ಧ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್ ಸರ್ವೋಚ್ಛ ನ್ಯಾಯಾಲಯದ ಕ್ಷಮೆಯಾಚಿಸಲು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿತು. ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ? ಈ ಪದ ಅಷ್ಟು ಕೆಟ್ಟದಾಗಿದೆಯೇ? ಎಂದು ನ್ಯಾಯಪೀಠ ಕೇಳಿತು.
ತಾವು ಮಾಡಿದ ನ್ಯಾಯಾಂಗ ನಿಂದನೆ ಟ್ವೀಟ್ ಕುರಿತು ಕೋರ್ಟ್ ಯಾವುದೇ ಶಿಕ್ಷೆ ನೀಡಲಿ, ಅನುಭವಿಸುತ್ತೇನೆ. ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು. ಈ ಹಿನ್ನೆಲೆ ಕೋರ್ಟ್ ಅವರಿಗೆ ಈ ಪ್ರಶ್ನೆ ಕೇಳಿದೆ. ಇದೇ ವೇಳೆ ಪ್ರಶಾಂತ್ ಭೂಷಣ್ ಅವರ ಪರ ವಾದಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಶಾಂತ್ ಭೂಷಣ್ ಅವರನ್ನು ಹುತಾತ್ನರನ್ನಾಗಿ ಮಾಡಬಾರದು, ಅವರು ಕೊಲೆ ಅಥವಾ ಕಳ್ಳತನದಲ್ಲಿ ದೋಷಿಯಾಗಿಲ್ಲ. ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ನ್ಯಾಯಾಲಯ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.
ರಾಜೀವ್ ಧವನ್ ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಬಹುಶಃ ಇದು ಕ್ಷಮಾಪಣೆ ನೀಡಲು ಉತ್ತಮ ಪ್ರಕರಣವಾಗಿರಬಹುದು. ಆದರೆ ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಸತ್ಯಾಂಶಗಳನ್ನು ಓರೆಗೆ ಹಚ್ಚಬೇಕು. ಒಂದು ವೇಳೆ ಸರ್ವೋಚ್ಛ ನ್ಯಾಯಾಲಯ ಅವರನ್ನು ಕ್ಷಮಿಸಿ ಎಚ್ಚರಿಕೆ ನೀಡಿ ಪ್ರಕರಣದಿಂದ ವಜಾಗೊಳಿಸಲೂ ಬಹುದು ಎಂದು ಹೇಳಿದರು.
ಬಳಿಕ ನ್ಯಾಯಪೀಠ, ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಲು ನಿರಾಕರಿಸಿದ ನಂತರವೂ ತಮ್ಮ ಅಫಿಡೆವಿಟ್‍ನಲ್ಲಿ ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಸುಪ್ರೀಂ ಕೋರ್ಟ್ ಗಮನಿಸಿದೆ. ನ್ಯಾಯಾಂಗ ನಿಂದನೆ ಕುರಿತು ಮಾಡಿದ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ಕ್ಷಮೆಯಾಚಿಸುವ ನಿಲುವಿನ ಕುರಿತು ಯೋಚಿಸುವಂತೆ ಭೂಷಣ್ ಅವರಿಗೆ ಕೋರ್ಟ್ 30 ನಿಮಿಷಗಳ ಕಾಲಾವಕಾಶ ನೀಡುತ್ತದೆ ಎಂದು ಹೇಳಿತು.
ಇದಾದ ಬಳಿಕವೂ ಧವನ್ ವಾದ ಮುಂದುವರಿಸಿ, ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಕುಸಿದಿದೆ ಎಂದು ಪ್ರಶಾಂತ್ ಭೂಷಣ್ ಹೇಳುತ್ತಾರೆ. ಇದು ಆಕ್ಷೇಪಾರ್ಹವಲ್ಲವೇ ಎಂದು ಪ್ರಶ್ನಿಸಿತು.
ಅದಾಗ್ಯೂ ವಾದ ಮುಂದುವರಿಸಿದ ಭೂಷಣ್ ಪರ ವಕೀಲ ಧವನ್, ಪ್ರಶಾಂತ್ ಭೂಷಣ್ ಅವರನ್ನು ಕ್ಷಮಿಸಬೇಕು. ಎಚ್ಚರಿಕೆ ನೀಡಿ ಕಳುಹಿಸಬೇಕು. ಕೋರ್ಟ್ ಇದನ್ನು ಸಹಾನುಭೂತಿ ದೃಷ್ಟಿಕೋನದಿಂದ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ ನ್ಯಾಯಾಲಯ ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಬೇಕು ಎಂದು ಹೇಳಿತು. ಬಳಿಕ ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

