ವಿಶಾಖಪಟ್ಟಣ: ಆಂಧ್ರ ಪ್ರದೇಶ ಪೊಲೀಸರ ಬಳಿ 12 ಮಂದಿ ನಕ್ಸಲರು ಶನಿವಾರ ಶರಣಾಗಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಚಿಂತಪಲ್ಲಿ ಪ್ರದೇಶದಲ್ಲಿ 12 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ನಕ್ಸಲರು ಚಿಂತಪಲ್ಲಿ ಎಎಸ್‌ಪಿ ವಿದ್ಯಾ ಸಾಗರ್ ನಾಯ್ಡು ಅವರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದು, ಇವರು ಗಾಲಿಕೊಂಡ, ಪನಸಲಬಂದ, ಆಕುಲೂರು ಮತ್ತು ರಾಮಗಡ್ಡ ಗ್ರಾಮಗಳಿಗೆ ಸೇರಿದವರು ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಎಸ್‌ಪಿ ವಿದ್ಯಾ ಸಾಗರ್ ನಾಯ್ಡು ಅವರು, 'ಜನರನ್ನು ಮಾಹಿತಿದಾರರೆಂದು ಶಂಕಿಸುವುದು ಮತ್ತು ಊಹಾಪೋಹಗಳ ಆಧಾರದ ಮೇಲೆ ಜನರನ್ನು ಹತ್ಯೆ ಮಾಡುವ ಅನಾಗರಿಕ ಕೃತ್ಯಗಳಿಂದ ಇವರು ಬೇಸರಗೊಂಡಿದ್ದರು. ವೈಜಾಗ್ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಮಾವೋವಾದಿಗಳ ಒತ್ತಡದ ಮೇರೆಗೆ ಅವರ ಪರ ಕೃತ್ಯಗಳಲ್ಲಿ ನಿರತರಾಗಿದ್ದೆವು ಎಂದು ಶರಣಾದವರು ಹೇಳಿದ್ದಾರೆ. ಜನರೂ ಸ್ವ ಇಚ್ಛೆಯಿಂದ ಮಾವೋವಾದಿಗಳ ಪರ ಕೆಲಸ ಮಾಡುತ್ತಿಲ್ಲ. ಕೊಲೆ ಬೆದರಿಕೆಗಳ ಪರಿಣಾಮ ಮಾವೋವಾದಿಗಳ ಪರ ಚಟುವಟಿಕೆಗಳನ್ನು ನಡೆಸುತ್ತಾರೆ. ಈ ಗ್ರಾಮಗಳು ಹಿಂದಿನಿಂದಲೂ ಮಾವೋವಾದಿಗಳ ಭದ್ರ ಕೋಟೆಯಾಗಿವೆ. ಹೀಗಾಗಿ, ಈ ಪ್ರದೇಶಗಳಿಂದಲೇ ನಕ್ಸಲರು ಶರಣಾಗಿರುವುದು ಚಿಂತಪಲ್ಲಿ ಉಪ ವಿಭಾಗದಲ್ಲಿ ಮಾವೋವಾದಿಗಳ ಬಲ ಕಡಿಮೆಯಾಗುತ್ತಿರುವುದರ ಸೂಚನೆಯಾಗಿದೆ ಎಂದು ನಾಯ್ಡು ಹೇಳಿದ್ದಾರೆ.
Advertisement