ಜಾಮಿಯಾದಿಂದ ಪಾರ್ಲಿಮೆಂಟ್ ಕಡೆಗೆ ಹೊರಟಿದ್ದ ಜಾಥಾಕ್ಕೆ ತಡೆ: ಪೊಲೀಸರೊಂದಿಗೆ ಸಿಎಎ ವಿರೋಧಿ ಪ್ರತಿಭಟನಾಕಾರರ ಜಟಾಪಟಿ
ನವದೆಹಲಿ: ಜಾಮಿಯಾ ವಿಶ್ವವಿದ್ಯಾನಿಲಯದಿಂದ ಪಾರ್ಲಿಮೆಂಟ್ ಕಡೆಗೆ ಹೊರಟಿದ್ದ ಪ್ರತಿಭಟನಾ ಜಾಥಾವನ್ನು ತಡೆದ ನಂತರ ಜಾಮಿಯಾ ನಗರದ ನಿವಾಸಿಗಳು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರತಿಭಟನಾಕಾರರು ಪೊಲೀಸರೊಂದಿಗೆ ಜಟಾಪಟಿ ನಡೆಸಿದರು.
ಜಾಮಿಯಾ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಈ ಜಾಥಾದಲ್ಲಿ ಜಾಮಿಯಾದ ವಿದ್ಯಾರ್ಥಿಗಳು , ಹಳೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಸಂಸತ್ ಕಡೆಗೆ ಜಾಥಾವನ್ನು ಆಯೋಜಿಸಲಾಗಿತ್ತು.
ಸಂಸತ್ ಕಡೆಗೆ ಜಾಥಾಕ್ಕೆ ಪ್ರತಿಭಟನಾಕಾರರು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜಾಮಿಯಾ ವಿಶ್ವವಿದ್ಯಾಲಯದ ಸುತ್ತಮುತ್ತ ಬಿಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
ಜಾಮಿಯಾದ ಗೇಟ್ ನಂಬರ್ 7 ರಿಂದ ಜಾಥಾವನ್ನು ಪ್ರತಿಭಟನಾಕಾರರು ಆರಂಭಿಸಿದರು. ಜಾಥಾವನ್ನು ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿಕೊಂಡರೂ ಜಗ್ಗದ ಪ್ರತಿಭಟನಾಕಾರರು, ನಾವು ನಮ್ಮ ದಾಖಲೆಗಳನ್ನು ತೋರಿಸಲ್ಲ, ಬ್ರಿಟಿಷರಿಗೆ ಹೆದರಲಿಲ್ಲ, ಇತರರಿಗೆ ನಾವೇಕೆ ಹೆದರಬೇಕು ಎಂಬ ಘೋಷಣೆ ಕೂಗಿದರು.ಅನೇಕ ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪುರುಷರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದಿಂದ ಯಾರೊಬ್ಬರೂ ಬಂದು ನಮ್ಮ ಮನವಿಯನ್ನು ಆಲಿಸಲಿಲ್ಲ. ಹಾಗಾಗೀ ಅವರ ಬಳಿಗೆ ನಾವು ಹೋಗುತ್ತಿದ್ದೇವೆ ಎಂದು ಬುರ್ಖಾ ಧರಿಸಿದ್ದ ಪ್ರತಿಭಟನಾಕಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಜಾಥಾವನ್ನು ತಡೆಯಲು ಪೊಲೀಸರು ಮುಂದಾದಾಗ ಜಟಾಪಟಿವೇರ್ಪಟ್ಟಿತು. ಹಲವು ಪ್ರತಿಭಟನಾಕಾರರು ಪೊಲೀಸರು ಹಾಕಿದ ಬ್ಯಾರಿಕೇಡ್ ಗಳ ಮೇಲೆ ಹಾರಿದ ಪ್ರಸಂಗವೂ ನಡೆಯಿತು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ