ಗಲಭೆ ಪೀಡಿತ ಈಶಾನ್ಯ ದೆಹಲಿಯಲ್ಲಿ ಮರುಕಳಿಸಿದ ಶಾಂತಿ: ಐದು ದಿನಗಳ ನಂತರ ತೆರೆದ ಅಂಗಡಿಗಳು

ಈ ವಾರದ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧವಾದ ಗುಂಪುಗಳ ನಡುವಣ ಘರ್ಷಣೆಯಿಂದಾಗಿ ಹಿಂಸಾಚಾರವೇರ್ಪಟ್ಟಿದ್ದ ಈಶಾನ್ಯ ದೆಹಲಿಯಲ್ಲಿ ಇಂದು ಬೆಳಗ್ಗೆ ಶಾಂತಿಯುತ ಪರಿಸ್ಥಿತಿ ಕಂಡುಬಂದಿತು. ಈ ಪ್ರದೇಶದಲ್ಲಿನ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಗಲಭೆ ಪೀಡಿತ ಪ್ರದೇಶ
ಗಲಭೆ ಪೀಡಿತ ಪ್ರದೇಶ

ನವದೆಹಲಿ: ಈ ವಾರದ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧವಾದ ಗುಂಪುಗಳ ನಡುವಣ ಘರ್ಷಣೆಯಿಂದಾಗಿ ಹಿಂಸಾಚಾರವೇರ್ಪಟ್ಟಿದ್ದ ಈಶಾನ್ಯ ದೆಹಲಿಯಲ್ಲಿ ಇಂದು ಬೆಳಗ್ಗೆ ಶಾಂತಿಯುತ ಪರಿಸ್ಥಿತಿ ಕಂಡುಬಂದಿತು. ಈ ಪ್ರದೇಶದಲ್ಲಿನ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಪಥ ಸಂಚಲನ ನಡೆಸುತ್ತಿರುವ ಭದ್ರತಾ ಸಿಬ್ಬಂದಿಗಳು, ನಿರಂತರವಾಗಿ ಇಲ್ಲಿನ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಭೀತಿಯನ್ನು ಹೋಗಲಾಡಿಸಿ ಆತ್ಮಸ್ಥೈರ್ಯವನ್ನು ತುಂಬುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ  ವದಂತಿಗಳಿಗೆ ಕಿವಿ ಗೂಡದಂತೆ  ಸಲಹೆ ನೀಡುತ್ತಿದ್ದಾರೆ

ಈ ಮಧ್ಯೆ ದ್ವೇಷಕಾರಿ ಸಂದೇಶಗಳನ್ನು ಹರಡುವ ವಾಟ್ಸಾಪ್ ನಂಬರ್ ಗಳ ಬಗ್ಗೆ ನೀಡಲಾಗುವ ದೂರುಗಳನ್ನು ದೆಹಲಿ ಸರ್ಕಾರ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೋಮು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ರೀತಿಯ ಸಂದೇಶಗಳನ್ನು ಫಾರ್ವಡ್ ಮಾಡದಂತೆ ಸರ್ಕಾರಿ ಅಲ್ಲಿನ ಜನರನ್ನು ಮನವಿ ಮಾಡಿಕೊಳ್ಳುತ್ತಿದೆ. 

ಗಲಭೆಯಲ್ಲಿ ಬಲಿಯಾದವರ ಪಾರ್ಥೀವ ಶರೀರವನ್ನು ಪಡೆಯಲು ಅವರ ಸಂಬಂಧಿಕರು ಜಿಟಿಬಿ ಆಸ್ಪತ್ರೆಯ ಶವಾಗಾರದ ಬಳಿ ಇರುವ ದೃಶ್ಯ ಕಂಡುಬಂದಿತು.  ಮೌಜ್ ಪುರ್, ಬಾಬರ್ ಪುರ ಮತ್ತಿತರ ಕಡೆಗಳಲ್ಲಿ  ಸಹಜ ಪರಿಸ್ಥಿತಿಯಿದೆ. 

ಐದು ದಿನಗಳ ವಿರಾಮದ ಬಳಿಕ ದಿನಸಿ, ಸಿಹಿತಿಂಡಿ ಹಾಗೂ ಔಷಧಿಗಳ ಅಂಗಡಿಗಳಂತಹ ದಿನನಿತ್ಯ ಸರಕು ಮಾರಾಟದ ಅಂಗಡಿಗಳು ತೆರೆದಿದ್ದು, ಇದೀಗ ಜನ ಜೀವನ ಸಾಮಾನ್ಯವಾಗಿದೆ. ಗ್ರಾಹಕರು ತಮ್ಮ ದಿನನಿತ್ಯದ ಸರಕುಗಳನ್ನು ಕೊಳ್ಳಲು ಅಂಗಡಿಗಳತ್ತ ಮುಖ ಮಾಡಿದ್ದಾರೆ . ಆದರೆ, ಐದು ದಿನಗಳ ಕಾಲ ಅಂಗಡಿ ಮುಚ್ಚಿದ್ದರಿಂದ ಸರಕುಗಳ ಕೆಟ್ಟಿವೆ ಎಂದು ಸಿಹಿ ಅಂಗಡಿಯ ಮಾಲೀಕ ನಾರಾಯಣ್ ಅಗರ್ ವಾಲ್ ಎಂಬವರು ತಿಳಿಸಿದರು. 

ಹಿಂಸಾಚಾರದ ನಂತರ ಹಾಲಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ, ಇದೀಗ ಜನರು ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಹಾಲಿನ ವ್ಯಾಪಾರಿ ಶ್ಯಾಮ್ ಲಾಲ್ ಹೇಳಿದರು. ಅಂಗಡಿಗಳನ್ನು ತೆರೆಯುವಂತೆ ಪೊಲೀಸರು ಮಾಲೀಕರನ್ನು ಮನವೊಲಿಸುತ್ತಿದ್ದಾರೆ. 

ಈಶಾನ್ಯ ದೆಹಲಿಯ ಜಾಫ್ರಬಾದ್, ಬಾಬರ್ ಪುರ, ಮೌಜ್ ಪುರ, ಚಾಂದ್ ಬಾಗ್, ಶಿವ್ ವಿಹಾರ್, ಭಾಜನ್ ಪುರ ಮತ್ತಿತರ ಕಡೆಗಳಲ್ಲಿ ಉಂಟಾಗಿದ್ದ ಹಿಂಸಾಚಾರದಲ್ಲಿ 42 ಜನರು ಸಾವನ್ನಪ್ಪಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com