ಸಿಎಎ ಹಿಂಸಾಚಾರ: 48 ಮಂದಿಗೆ ಜಾಮೀನು ನೀಡಿದ ಉ.ಪ್ರ. ಕೋರ್ಟ್: ಪೊಲೀಸರ ಪುರಾವೆ ಪ್ರಶ್ನಿಸಿದ ನ್ಯಾಯಾಲಯ 

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಬಿಜ್ನೊರ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕೊಲೆಗೆ ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಕೇಸಿನಿಂದ 48 ಮಂದಿಗೆ ಬಿಜ್ನೊರ್ ಜಿಲ್ಲಾ ಕೋರ್ಟ್ ಗುರುವಾರ ಜಾಮೀನು ನೀಡಿದೆ.
ಸಿಎಎ ಹಿಂಸಾಚಾರ: 48 ಮಂದಿಗೆ ಜಾಮೀನು ನೀಡಿದ ಉ.ಪ್ರ. ಕೋರ್ಟ್: ಪೊಲೀಸರ ಪುರಾವೆ ಪ್ರಶ್ನಿಸಿದ ನ್ಯಾಯಾಲಯ 
Updated on: 

ಬಿಜ್ನೊರ್: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಬಿಜ್ನೊರ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕೊಲೆಗೆ ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಕೇಸಿನಿಂದ 48 ಮಂದಿಗೆ ಬಿಜ್ನೊರ್ ಜಿಲ್ಲಾ ಕೋರ್ಟ್ ಗುರುವಾರ ಜಾಮೀನು ನೀಡಿದೆ.


ಒಟ್ಟು 83 ಮಂದಿ ಆರೋಪಿಗಳಲ್ಲಿ 48 ಆರೋಪಿಗಳಿಗೆ ಇಂದು ಜಾಮೀನು ಸಿಕ್ಕಿದೆ.ಅರ್ಜಿ ವಿಚಾರಣೆಯನ್ನು ಆಲಿಸಿದ ಬಿಜ್ನೊರ್ ಕೋರ್ಟ್ ನ ನ್ಯಾಯಾಧೀಶರು, ಪೊಲೀಸರ ತನಿಖೆ ವಿರುದ್ಧ ಕೆಲವೊಂದು ಕಠಿಣ ಅವಲೋಕನ ನಡೆಸಿ ತೀರ್ಪು ನೀಡಿದ್ದಾರೆ. 


ಪೊಲೀಸರ ಎಫ್ಐಆರ್ ನಲ್ಲಿ ಪ್ರತಿಭಟನಾ ನಿರತ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಹೇಳಿದೆ. ಆದರೆ ನಂತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಬಗ್ಗೆ ಪೊಲೀಸರು ಕೋರ್ಟ್ ಗೆ ಸಲ್ಲಿಸಿದ ಸಾಕ್ಷಿಗಳಲ್ಲಿ ಅದಕ್ಕೆ ಪುರಾವೆಗಳಿಲ್ಲ. ಕೋರ್ಟ್ ನಲ್ಲಿ ಯಾವುದೇ ಪುರಾವೆಗಳನ್ನು ಸಲ್ಲಿಸಲು ಸರ್ಕಾರಿ ವಕೀಲರು ವಿಫಲರಾಗಿದ್ದಾರೆ. ಅದರರ್ಥ ಗಲಭೆಯಲ್ಲಿ ಭಾಗಿಯಾದ ಯಾರೋ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರಬೇಕು ಎಂದು ಕಂಡುಬರುತ್ತದೆ. ಗಲಭೆ ವೇಳೆ ಖಾಸಗಿ ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ ಎಂಬುದಕ್ಕೆ ಸಹ ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಹೇಳಿದರು.


ಸರ್ಕಾರದ ಪರ ವಕೀಲರು ಗಲಭೆಯಲ್ಲಿ 13 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ವೈದ್ಯಕೀಯ ವರದಿಯಲ್ಲಿ ಇವರಿಗೆಲ್ಲಾ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳುತ್ತಿವೆ ಎಂದು ಸಹ ನ್ಯಾಯಾಧೀಶರು ಇಂದು ತೀರ್ಪು ಓದುವಾಗ ಹೇಳಿದರು.


ಕಳೆದ ಡಿಸೆಂಬರ್ 20ರಂದು ಬಿಜ್ನೊರ್ ನಲ್ಲಿ ನಡೆದ ಗುಂಪು ಗಲಭೆ ವೇಳೆ ಇಬ್ಬರು ಮೃತಪಟ್ಟಿದ್ದು ಅವರಲ್ಲಿ ಓರ್ವ ಪೊಲೀಸರ ಗುಂಡಿಗೆ ಬಲಿಯಾಗಿದ್ದರು ಎಂದು ಪೊಲೀಸರು ಒಪ್ಪಿಕೊಂಡಿದ್ದರು. ಗಲಭೆ ಸಂಬಂಧ ಒಟ್ಟು 83 ಮಂದಿ ಬಂಧಿಯಾಗಿದ್ದರು.


ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 19 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿತ್ತು. ನೂರಾರು ಜನರಿಗೆ ಗಾಯಗಳಾಗಿದ್ದವು. 

 ಹಿಂಸಾಚಾರವನ್ನು ಹತ್ತಿಕ್ಕುವ ಕಾರ್ಯದಲ್ಲಿ ರಾಜ್ಯ ಪೊಲೀಸರು ಸಾವಿರಾರು ಜನರನ್ನು ಬಂಧಿಸಿದ್ದರು. ಅವರಲ್ಲಿ ಹಲವರ ವಿರುದ್ಧ ದಂಗೆ ಮತ್ತು ಕೊಲೆ ಯತ್ನದ ಕೇಸನ್ನು ದಾಖಲಿಸಲಾಗಿತ್ತು. 


ಇನ್ನು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕೆಲವು ಆರೋಪಿಗಳ ಪರ ವಕೀಲ ಅಹ್ಮದ್ ಜಕಾವತ್, ನ್ಯಾಯಾಲಯ ಪ್ರತಿ ವರದಿಯನ್ನು ಇಂದು ವಿಚಾರಣೆ ವೇಳೆ ಕೇಳಿತು, ಪ್ರತಿಭಟನಾನಿರತರು ಗುಂಡಿನ ದಾಳಿ ನಡೆಸಿದರು, ವಾಹನಗಳನ್ನು ಧ್ವಂಸಗೊಳಿಸಿದರು ಎಂಬ ಪೊಲೀಸರ ಆರೋಪಗಳಿಗೆ  ಸರ್ಕಾರಿ ಪರ ವಕೀಲರು ಸಾಕ್ಷಿ ನೀಡುವಲ್ಲಿ ವಿಫಲರಾದ ಹಿನ್ನಲೆಯಲ್ಲಿ 48 ಮಂದಿಗೆ ಜಾಮೀನು ಸಿಕ್ಕಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com