ವಿಕಾಸ್ ದುಬೆ(ಸಂಗ್ರಹ ಚಿತ್ರ)
ವಿಕಾಸ್ ದುಬೆ(ಸಂಗ್ರಹ ಚಿತ್ರ)

ಕಾನ್ಪುರದಿಂದ ಉಜ್ಜೈನಿವರೆಗೆ: ವಿಕಾಸ್ ದುಬೆ 5 ರಾಜ್ಯಗಳಲ್ಲಿ 1,200 ಕಿ.ಮೀ. ಪ್ರಯಾಣಿಸಿ ಸಿಕ್ಕಿಬಿದ್ದಿದ್ದು ಹೇಗೆ?

ಭರ್ತಿ ಒಂದು ವಾರ ಕಾಲ ಪೊಲೀಸರ ಆಟವಾಡಿಸಿ, ಕಣ್ತಪ್ಪಿಸಿ ಮರೆಯಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
Published on

ಲಕ್ನೊ: ಭರ್ತಿ ಒಂದು ವಾರ ಕಾಲ ಪೊಲೀಸರ ಆಟವಾಡಿಸಿ, ಕಣ್ತಪ್ಪಿಸಿ ಮರೆಯಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಪೊಲೀಸರು ಕೊಂದುಹಾಕಿದ್ದು ಕಾನ್ಪುರದ ಬಿಕ್ರು ಎಂಬ ಗ್ರಾಮದಲ್ಲಿ. ಅದಕ್ಕೂ ಮುನ್ನ ವಿಕಾಸ್ ದುಬೆ ಕಾನ್ಪುರದ ಚೌಬೆಯ್ಪುರ್ ನಿಂದ ಮಧ್ಯ ಪ್ರದೇಶದ ಉಜ್ಜೈನಿಯವರೆಗೆ 5 ರಾಜ್ಯಗಳನ್ನು 1200 ಕಿಲೋ ಮೀಟರ್ ಸುತ್ತಿ ಬಂದಿದ್ದ.

ಕಳೆದ ಒಂದು ವಾರದಿಂದ ನಡೆದಿದ್ದೇನು?: 8 ಮಂದಿ ಪೊಲೀಸರ ಹತ್ಯಾಕಾಂಡವಾದ ನಂತರ ಉತ್ತರ ಪ್ರದೇಶ ವಿಶೇಷ ಪೊಲೀಸ್ ಪಡೆ ಕಳೆದ ಜುಲೈ 3ರಿಂದ ವಿಕಾಸ್ ದುಬೆಯ ಬಂಧನಕ್ಕೆ ಬೆನ್ನತ್ತಿ ಹೋಗಿತ್ತು. ಜುಲೈ 3ರಂದು ಮಧ್ಯರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ವಿಕಾಸ್ ದುಬೆ ತನ್ನ ಸಹಚರ ಕಾರ್ತಿಕೇಯ ಅಲಿಯಾಸ್ ಪ್ರಭಾತ್ ಮಿಶ್ರಾ ಜೊತೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಪರಾರಿಯಾಗಿದ್ದ. ಕಾನ್ಪುರ ದೆಹತ್ ನ ಶಿವ್ಲಿಯ ಸ್ನೇಹಿತನ ಮನೆಗೆ ಇಬ್ಬರೂ ಸೇರುತ್ತಾರೆ. ಅಲ್ಲಿಂದ ಅದೇ ದಿನ ಬೆಳಗ್ಗೆ 5 ಗಂಟೆಗೆ ಪಕ್ಕದ ಅರಣ್ಯ ಪ್ರದೇಶಕ್ಕೆ ಮೂವರು ಪರಾರಿಯಾಗಿದ್ದಾರೆ.

ಶಿವ್ಲಿಯಲ್ಲಿ ನಂತರ ಎರಡು ದಿನ ಉಳಿದುಕೊಂಡಿದ್ದರು. ಪೊಲೀಸರಿಗೆ ಇದು ಗೊತ್ತಾಗಿ 40 ಪೊಲೀಸರು ಸುತ್ತುವರೆದು ಹಗಲು ರಾತ್ರಿ ಕಾಯುತ್ತಿದ್ದರು. ಶಿವ್ಲಿಯಿಂದ ವಿಕಾಸ್ ದುಬೆ ಟ್ರಕ್ ಮೂಲಕ ಕಳೆದ ಭಾನುವಾರ ಬೆಳಗ್ಗೆ 5 ಗಂಟೆ ಹೊತ್ತಿಗೆ ಅಲ್ಲಿಂದ 92 ಕಿಲೋ ಮೀಟರ್ ದೂರದಲ್ಲಿ ಔರಿಯ್ಯಾ ಎಂಬ ಪ್ರದೇಶಕ್ಕೆ ಹೋಗುತ್ತಾನೆ.ಅಲ್ಲಿ ಕೂಡ ಪೊಲೀಸರು ವಿಕಾಸ್ ದುಬೆಯ ಬಂಧನಕ್ಕೆ ಬಲೆ ಬೀಸುತ್ತಿದ್ದರು. ಆದರೂ ಪೊಲೀಸರ ಕಣ್ತಪ್ಪಿಸುವಲ್ಲಿ ಯಶಸ್ವಿಯಾಗಿದ್ದ.

ಜುಲೈ 5ರಂದು ಔರಿಯ್ಯಾದಿಂದ ದೆಹಲಿಯ ಬದರ್ಪುರ್ ಗೆ ವಿಕಾಸ್ ದುಬೆ ತಲುಪಿದನು. ಅದು ಎಸ್ ಯುವಿ ಕಾರಿನಲ್ಲಿ ಹೋಗಿದ್ದನು. ಕಾನ್ಪುರದಿಂದ ಮೂರೇ ದಿನದಲ್ಲಿ 385 ಕಿಲೋ ಮೀಟರ್ ದೂರ ತಲುಪಿದ್ದನು. ಮರುದಿನ ಜುಲೈ 6ರಂದು ಬೆಳಗ್ಗೆ 10 ಗಂಟೆಗೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಬರ್ದಾರ್ ಪುರ ಹೊಟೇಲ್ ನಲ್ಲಿ ವಿಕಾಸ್ ದುಬೆ ಉಳಿದುಕೊಂಡಿದ್ದಾನೆ ಎಂದು ಮಾಹಿತಿ ಪಡೆದು ಅಲ್ಲಿಗೆ ತಲುಪುತ್ತಾರೆ. ಆದರೆ ವಿಕಾಸ್ ದುಬೆ ಅದಾಗಲೇ ಹರ್ಯಾಣದ ಫರಿದಾಬಾದ್ ತಲುಪಿಯಾಗಿತ್ತು.

ಮರುದಿನ ಜುಲೈ 7ರಂದು ಪೊಲೀಸರು ಫರಿದಾಬಾದ್ ನ ಸಿಹಿತಿಂಡಿ ಮಳಿಗೆ ಬಳಿ ಇದ್ದಾನೆಂದು ತಿಳಿದು ಅಲ್ಲಿಗೆ ಹೋಗುತ್ತಾರೆ. ಆದರೆ ಅಲ್ಲಿ ಎಲ್ಲಿ ಹುಡುಕಿದರೂ ಸಿಗಲಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ವಿಕಾಸ್ ದುಬೆ ಅಂಗಡಿಯೊಂದರಿಂದ ಹೊರಬಂದು ಆಟೋ ಹತ್ತಿ ಹೋಗುತ್ತಿರುವುದು ದಾಖಲಾಗಿದೆ.

ಫರೀದಾಬಾದ್ ನಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ದುಬೆ ಎರಡು ದಿನ ಕಳೆದಿದ್ದಾನೆ ಎಂದು ತಿಳಿದುಬಂತು. ಅಲ್ಲಿಂದ ಶ್ರೀ ಸರಸಮ್ ಗೆಸ್ಟ್ ಹೌಸ್ ನಲ್ಲಿ ರೂಂ ಪಡೆಯಲು ಕೇಳುತ್ತಾನೆ, ಆದರೆ ಅವರು ಕೊಡಲು ನಿರಾಕರಿಸುತ್ತಾರೆ. ಉತ್ತರ ಪ್ರದೇಶ ಮತ್ತು ಹರ್ಯಾಣ ಪೊಲೀಸರು ತನ್ನ ಬಂಧನಕ್ಕೆ ಬಲೆ ಬೀಸುತ್ತಿದ್ದಾರೆ ಎಂದು ವಿಷಯ ಗೊತ್ತಾಗಿ ಅಲ್ಲಿಂದ ಪರಾರಿಯಾಗುತ್ತಾನೆ.

ಫರಿದಾಬ್ ನಲ್ಲಿ ಇದ್ದ ವಿಷಯವನ್ನು ತಿಳಿದ ಹರ್ಯಾಣ ಅಪರಾಧ ವಿಭಾಗ ಪೊಲೀಸರು ಆತನ ಮೂವರು ಸಹಚರರನ್ನು ಬಂಧಿಸಿದರು. ಕಾನ್ಪುರದಲ್ಲಿ ಪೊಲೀಸರ ಹತ್ಯೆ ಮಾಡಿದ್ದ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದರು. ಆದರೆ ವಿಕಾಸ್ ದುಬೆ ಮಾತ್ರ ಸಿಗಲಿಲ್ಲ. ಕಳೆದ ಬುಧವಾರ ಬೆಳಗ್ಗೆ ಮತ್ತೆ ಫರಿದಾಬಾದ್ ನಿಂದ ತಪ್ಪಿಸಿಕೊಂಡು ಹೋದ.

ವಿಕಾಸ್ ದುಬೆ ಫರಿದಾಬಾದ್ ನಿಂದ ಖಾಸಗಿ ಕಾರಿನಲ್ಲಿ ದೆಹಲಿಗೆ ಹಿಂತಿರುಗಿದ ನಂತರ ಅದೇ ದಿನ 269 ಕಿಲೋ ಮೀಟರ್ ಪ್ರಯಾಣ ಮಾಡಿ ರಾಜಸ್ತಾನದ ಜೈಪುರಕ್ಕೆ ತಲುಪಿದ. ಅಲ್ಲಿ ಬಸ್ ನಲ್ಲಿ ಕೋಟಾಕ್ಕೆ ಹೋಗುವಾಗ ಜೈಪುರ ನಿವಾಸಿಗಳು ಆತನನ್ನು ಗುರುತು ಹಿಡಿದರು. ನಂತರ ಅಲ್ಲಿಂದ ಮಧ್ಯ ಪ್ರದೇಶದ ಉಜ್ಜೈನಿಗೆ ಹೋಗಿದ್ದ. ಅದಕ್ಕೂ ಮುನ್ನ ಕೋಟದಲ್ಲಿ ಸ್ವಲ್ಪ ಹೊತ್ತು ನೆಲೆಸಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಉಜ್ಜೈನಿಗೆ ಬಸ್ ನಲ್ಲಿ ಹೊರಟು ಬೆಳಗಿನ ಜಾವ 8 ಗಂಟೆ ಸುಮಾರಿಗೆ 252 ಕಿಲೋ ಮೀಟರ್ ಪ್ರಯಾಣಿಸಿ ತಲುಪಿದ್ದ. ಅಲ್ಲಿ ಪೊಲೀಸರು ವಿಕಾಸ್ ದುಬೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com