ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್, ಅಲ್ ಖೈದಾ ಉಗ್ರರಿದ್ದಾರೆ: ವಿಶ್ವಸಂಸ್ಥೆ ವರದಿ

ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಮತ್ತು ಅಲ್ ಖೈದಾ ಭಯೋತ್ಪಾದಕರಿದ್ದಾರೆ ಎಂದು ಬೆಚ್ಚಿಬೀಳಿಸುವ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಶ್ವಸಂಸ್ಥೆ: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಮತ್ತು ಅಲ್ ಖೈದಾ ಭಯೋತ್ಪಾದಕರಿದ್ದಾರೆ ಎಂದು ಬೆಚ್ಚಿಬೀಳಿಸುವ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ.

ಜಾಗತಿಕ ಮಟ್ಟದಲ್ಲಿ ಬೆದರಿಕೆಯ ಭಯೋತ್ಪಾದಕ ಗುಂಪುಗಳಾಗಿರುವ ಐಸಿಸ್ ಮತ್ತು ಅಲ್ ಖೈದಾ ಸಂಘಟನೆಗಳು ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್ ಗಳಲ್ಲಿ ಮಾತ್ರ ಸಕ್ರಿಯವಾಗಿರದೆ ಭಾರತೀಯ ಉಪಖಂಡಗಳಲ್ಲಿ ಸುಮಾರು 150ರಿಂದ 200ರಷ್ಟು ಸಂಖ್ಯೆಯ ಸದಸ್ಯರಿದ್ದಾರೆ. ಇವು ದಾಳಿ ನಡೆಸಲು ಹೊಂಚುಹಾಕುತ್ತಿವೆ ಎಂದು ಕೂಡ ವರದಿಯಲ್ಲಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಮೊನ್ನೆ ಜುಲೈ 23ರಂದು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ 26ನೇ ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ ವರದಿಯಲ್ಲಿ, ಐಸಿಸ್, ಅಲ್ ಖೈದಾ ಮತ್ತು ಅದರ ಸಹಚರ ಭಯೋತ್ಪಾದಕ ಗುಂಪುಗಳು ಭಾರತದ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿವೆ. ಉಗ್ರಗಾಮಿ ಸಂಘಟನೆಯ ಸದಸ್ಯ ಗುಂಪು ಐಎಸ್ ಇಂಡಿಯನ್ ಅಫ್ಫಿಲಿಯೇಟ್ (ವಿಲಯಹ್ ಹಿಂಡ್) ಹೆಸರಿನಲ್ಲಿ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದೆ.

ಭಾರತದಲ್ಲಿನ ಅಲ್ ಖೈದಾ ಗುಂಪಿನ ನಾಯಕ ಒಸಮಾ ಮಹಮ್ಮೂದ್ ಆಗಿದ್ದು, ಈತ ಮಾಜಿ ನಾಯಕ ಆಸಿಮ್ ಉಮರ್ ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿದ್ದಾನೆ. ಮಾಜಿ ನಾಯಕನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಈತ ಹೊಂಚು ಹಾಕುತ್ತಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್-19 ಪರಿಣಾಮ ಭಯೋತ್ಪಾದಕ ಸಂಘಟನೆಗಳ ಮೇಲೆ ಯಾವ ರೀತಿ ಆಗಿದೆ ಎಂಬುದರ ಬಗ್ಗೆ ವರದಿಯಲ್ಲಿ ವಿವರಿಸಲಾಗಿದ್ದು, ಲಾಕ್ ಡೌನ್ ಘೋಷಿಸಿದ್ದರಿಂದ ಉಗ್ರಗಾಮಿಗಳ ಸ್ವತಂತ್ರ ಚಲನವಲನ, ಯೋಜಿತ ಕುಕೃತ್ಯಗಳಿಗೆ ತೊಂದರೆಯಾಗಿದೆ. ಸಾರ್ವಜನಿಕವಾಗಿ ಗುಂಪು ಗುಂಪಾಗಿ ಜನರು ಸೇರುವುದು, ಬೃಹತ್ ಮಟ್ಟದ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಿರುವುದರಿಂದ ಉಗ್ರಗಾಮಿಗಳಿಗೆ ಯೋಜಿತ ಕೃತ್ಯವೆಸಗಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹೇರಿರುವುದು ಭಯೋತ್ಪಾದಕರ ಚಲನವಲನಗಳಿಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಪರ್ಕ ಕಲ್ಪಿಸುವುದಕ್ಕೆ, ಹಣಕಾಸು ಸಂಬಂಧಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟುಮಾಡಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯ ವರದಿಯಲ್ಲಿ, ಆಫ್ಘಾನಿಸ್ತಾನದ ನಿಮ್ರುಜ್, ಹೆಲ್ಮಾಂಡ್ ಮತ್ತು ಕಂದಹಾರ್ ಪ್ರಾಂತ್ಯಗಳಿಂದ ತಾಲಿಬಾನ್ ಸಂಘಟನೆಯ ಅಡಿಯಲ್ಲಿ ಐಸಿಸ್, ಅಲ್ ಖೈದಾಗಳು ಕೆಲಸ ಮಾಡುತ್ತಿದ್ದು ತಮ್ಮ ಮಾಜಿ ನಾಯಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಉಪ ಖಂಡಗಳಲ್ಲಿ ಹೊಂಚುಹಾಕುತ್ತಿವೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com