'ಪ್ರತ್ಯೇಕಿತ' ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ: ಸಿಎಂ ಜಗನ್ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರ ಅಂಕಿತ
ಅಮರವಾತಿ: ತೀವ್ರ ವಿರೋಧ ಮತ್ತು ತೀವ್ರ ಚರ್ಚೆಗಳ ನಡುವೆಯೇ 'ಪ್ರತ್ಯೇಕಿತ' ಆಂಧ್ರ ಪ್ರದೇಶ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ನೀಡುವ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪ್ರಸ್ತಾವನೆಗೆ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಾಭೂಸನ್ ಹರಿಚಂದನ್ ಅಂಕಿತ ಹಾಕಿದ್ದಾರೆ.
ಇದಲ್ಲದೆ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ನಡುವಿನ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಸಿಆರ್ ಟಿಎ ರದ್ಧು ಮಸೂದೆಗೂ ಕೂಡ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎನ್ನಲಾಗಿದೆ. ಆ ಮೂಲಕ ಇಲ್ಲಿಯವರೆಗೂ ಆಂಧ್ರ ಪ್ರದೇಶಕ್ಕೆ ಅಮರಾವತಿ ಮಾತ್ರವೇ ರಾಜಧಾನಿ ಎಂಬ ನಿಲುವಿಗೆ ಸಿಎಂ ಜಗನ್ ಎಳ್ಳು ನೀರು ಬಿಟ್ಟಿದ್ದು, ಅಮರಾವತಿ ಆಡಳಿತಾತ್ಮಕ ರಾಜಧಾನಿಯಾಗಿ ಮಾತ್ರ ಉಳಿಯಲಿದೆ. ಉಳಿದಂತೆ ವಿಶಾಖ ಪಟ್ಟಣ ಕಾರ್ಯ ನಿರ್ವಾಹಕ ರಾಜಧಾನಿಯಾಗಿರಲಿದ್ದು, ಕರ್ನೂಲು ಜಿಲ್ಲೆ ನ್ಯಾಯ ರಾಜಧಾನಿಯಾಗಿರಲಿದೆ.
ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ಕುರಿತು ಸಿಎಂ ಜಗನ್ ಸರ್ಕಾರ ಮೂರು ವಾರಗಳ ಹಿಂದಷ್ಟೇ ಆಂಧ್ರ ಪ್ರದೇಶ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆ ಮಂಡಿಸಿ ವಿಧಾನಸಭೆಯ ಅನುಮೋದನೆ ಪಡೆದಿತ್ತು. ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದ್ದರು. ಜತೆಗೆ ಆಂಧ್ರದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಮಂಡನೆ ಮಾಡಿದ್ದರು.
ಇದೇ ಮಸೂದೆಯಲ್ಲಿ ಆಂಧ್ರ ಪ್ರದೇಶ ವಿಧಾನ ಪರಿಷತ್ ನಲ್ಲೂ ಮಂಡಿಸಲಾಗಿತ್ತು. ಅಂದು ಟಿಟಿಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಮಸೂದೆ ಮಂಡನೆಗೆ ರಾಜ್ಯಪಾಲರು ನೀಡಿದ್ದ ಗಡುವು ಮುಕ್ತಾಯವಾದ ಹಿನ್ನಲೆಯಲ್ಲಿ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಲಾಗಿತ್ತು. ರಾಜ್ಯಪಾಲರಿಗೆ ಮಸೂದೆ ಕಳುಹಿಸಿಕೊಡುವ ಮುನ್ನ ಜಗನ್ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಈ ನೂತನ ಮಸೂದೆಯ ಅನ್ವಯ ಪ್ರಸ್ತುತ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗುತ್ತಿರುವ ವಿಶಾಖಪಟ್ಟಣ ಆಡಳಿತಾತ್ಮಕ ರಾಜಧಾನಿಯಾಗಲಿದೆ. ಅಮರಾವತಿ ಶಾಸನ ರಾಜಧಾನಿಯಾಗಿರಲಿದ್ದು, ನ್ಯಾಯ ರಾಜಧಾನಿ ಕರ್ನೂಲಿನಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ತಲೆ ಎತ್ತಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ